ನವದೆಹಲಿ: ಪೆಗಾಸಸ್... ಭಾರತೀಯ ಪ್ರಜಾಪ್ರಭುತ್ವದ ವಿರುದ್ಧ ಪಿತೂರಿ ನಡೆಸಿ ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಇತರರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಕೋಲಾಹಲದ ನಡುವೆ, ಐಟಿ ಸಚಿವ ಅಶ್ವಿನಿ ವೈಷ್ಣವ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ಒಂದು ದಿನ ಮೊದಲು ಪೆಗಾಸಸ್ ಸಂಬಂಧದ ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸಲಾಗಿದೆ ಎಂದು ಅಶ್ವಿನಿ ವೈಷ್ಣವ್ ಕೆರಳಿದರು. ಈ ಹಿಂದೆ ವಾಟ್ಸಾಪ್ ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತೀಯ ಪ್ರಜಾಪ್ರಭುತ್ವ ಮತ್ತು ದೇಶದ ವ್ಯವಸ್ಥೆಗಳನ್ನು ಅಪಖ್ಯಾತಿಗೊಳಿಸಲು ಕೆಲವರು ಇದನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಆರೋಪಿಸಿದರು.
ಐಟಿ ಸಚಿವ ಅಶ್ವಿನಿ ವೈಷ್ಣವ್ ವಿವರಣೆ ನೀಡುತ್ತಿರುವಾಗ ಟಿಎಂಸಿ ಸಂಸದ ಅಡ್ಡಿಪಡಿಸಿದರು. ಸಚಿವರ ಕೈಯಲ್ಲಿದ್ದ ಪತ್ರಗಳನ್ನು ಕಿತ್ತುಕೊಂಡು ಹರಿದು ಎಸೆದರು. ಸದನದ ಬಾವಿಗಿಳಿದು ಕೇಂದ್ರ ಸರ್ಕಾರದ ವರ್ತನೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ತಾರಕಕ್ಕೇರುತ್ತಿದ್ದಂತೆ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.
ಇದನ್ನೂ ಓದಿ: ರಾಜ್ಯಸಭೆ, ಲೋಕಸಭೆ ಕಲಾಪದಲ್ಲಿ Pegasus, ಐಟಿ ದಾಳಿ ಗದ್ದಲ: ಕಲಾಪ ಮುಂದೂಡಿಕೆ
ಇದಕ್ಕೂ ಮುನ್ನ ಅಧಿವೇಶನದಲ್ಲಿ ಪದೇ ಪದೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿತ್ತು. ನಂತರ ಉಭಯ ಕಲಾಪಗಳು ಸಮಾವೇಶಗೊಂಡಾಗಲೂ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸಿದವು. ಇದರೊಂದಿಗೆ ಲೋಕಸಭೆಯನ್ನು ಸಂಜೆ 4 ರವರೆಗೆ ಮುಂದೂಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಮತ್ತೊಂದೆಡೆ, ರಾಜ್ಯಸಭೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು. ಇದರ ಪರಿಣಾಮವಾಗಿ ಎರಡೂ ಸದನಗಳನ್ನು ನಾಳೆಗೆ ಮುಂದೂಡಲಾಯಿತು.