ಹಸನ್ಪುರ(ಬಿಹಾರ): 2016ರಿಂದಲೂ ಬಿಹಾರದಲ್ಲಿ ಮದ್ಯ ನಿಷೇಧವಿದೆ. ಆದರೂ, ಮೇಲಿಂದ ಮೇಲೆ ಮದ್ಯಪಾನ ಮಾಡಿ ಸಿಕ್ಕಿಬಿದ್ದಿರುವ ಅನೇಕ ಪ್ರಕರಣ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮದ್ಯ ಸೇವನೆ ಮಾಡಲು ಲೋಕೋ ಪೈಲಟ್ ಒಬ್ಬ ರೈಲು ನಿಲ್ಲಿಸಿರುವ ಘಟನೆ ನಡೆದಿದೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಹಸನ್ಪುರದಲ್ಲಿ ಈ ಪ್ರಕರಣ ನಡೆದಿದ್ದು, ಮದ್ಯ ಸೇವನೆ ಮಾಡುವ ಉದ್ದೇಶದಿಂದ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿರುವ ಲೋಕೋ ಪೈಲಟ್, ಸುಮಾರು ಒಂದು ಗಂಟೆಗಳ ಕಾಲ ಸ್ಥಳಕ್ಕೆ ಆಗಮಿಸಿಲ್ಲ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಿ, ರೈಲನ್ನು ಮುಂದಿನ ನಿಲ್ದಾಣಕ್ಕೆ ಕಳುಹಿಸಲಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಬಿಹಾರದ ಸಮಸ್ತಿಪುರದಿಂದ ಸಹರ್ಸಾಗೆ 05278 ಪ್ಯಾಸೆಂಜರ್ ರೈಲು ತೆರಳುತ್ತಿತ್ತು. ಹಸನ್ಪುರ ರೈಲು ನಿಲ್ದಾಣದಲ್ಲಿ ತುಂಬಾ ಹೊತ್ತು ರೈಲು ನಿಂತಿದೆ. ಈ ವೇಳೆ, ಪ್ರಯಾಣಿಕರು ರೈಲು ಓಡಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಲೋಕೋ ಪೈಲಟ್ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಬೇರೆ ಸಿಬ್ಬಂದಿ ಸಹಾಯದಿಂದ ರೈಲು ಮುಂದಿನ ನಿಲ್ದಾಣಕ್ಕೆ ಕಳುಹಿಸಿದ್ದಾರೆ.
ಒಂದು ಗಂಟೆ ನಿಲ್ದಾಣದಲ್ಲೇ ನಿಂತ ರೈಲು: ಲೋಕೋ ಪೈಲಟ್ ಕರ್ಮವೀರ್ ಪ್ರಸಾದ್, ಹಸನ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ, ಮಾರುಕಟ್ಟೆಗೆ ಹೋಗಿದ್ದು, ಮದ್ಯ ಸೇವನೆ ಮಾಡಿ ಗಲಾಟೆ ಮಾಡಿದ್ದಾನೆ. ಇದರ ಬಗ್ಗೆ ರೈಲ್ವೆ ಇಲಾಖೆಗೆ ಮಾಹಿತಿ ಸಹ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆತನನ್ನ ಕರೆದುಕೊಂಡು ಬಂದು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಕರ್ಮವೀರ್ ಬಳಿ ಮದ್ಯದ ಬಾಟಲಿ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.