ಮುಂಬೈ: ಮಹಾರಾಷ್ಟ್ರದಲ್ಲಿ ನಿತ್ಯವೂ ಕೊರೊನಾ ಪೀಡಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಜಾರಿಗೊಳಿಸಿದೆ. ಒಂದೊಮ್ಮೆ ಈ ನಿಯಮಗಳನ್ನ ರಾಜ್ಯದ ಜನತೆ ಅನುಸರಣೆ ಮಾಡದಿದ್ದರೆ ಮುಂದಿನ 8 ದಿನಗಳಲ್ಲಿ ಲಾಕ್ಡೌನ್ ಜಾರಿ ಮಾಡುವುದು ಅನಿವಾರ್ಯ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ.
ಈ ಸಂಬಂಧ ವಿಡಿಯೋ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಿಮಗೆ ಲಾಕ್ಡೌನ್ ಬೇಕಾ ಎಂದು ಪ್ರಶ್ನಿಸಿರುವ ಅವರು, ಈ ಸಂಬಂಧ ಇನ್ನು ಎಂಟು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂದು ಮಹಾರಾಷ್ಟ್ರದಲ್ಲಿ 7 ಸಾವಿರ ಕೋವಿಡ್ ಕೇಸ್ಗಳು ದಾಖಲಾಗಿವೆ. ಇದು ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಯಾರ್ಯಾರು ಮಾಸ್ಕ್ ಹಾಕದೇ, ದೂರವನ್ನ ಅಲಕ್ಷಿಸುತ್ತಿದ್ದೀರೋ ಅವರೆಲ್ಲ ನಿಯಮಗಳನ್ನ ಅನುಸರಿಸಿ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಮೈ ಫ್ಯಾಮಿಲಿ ಮೈ ರೆಸ್ಪಾನ್ಸಿಬಿಲಿಟಿ (ನನ್ನ ಕುಟುಂಬ ನನ್ನ ಜವಾಬ್ದಾರಿ) ಐ ಆ್ಯಮ್ ರೆಸ್ಪಾನ್ಸಿಬಲ್ (ನಾನೇ ಜವಾಬ್ದಾರ) ಎಂಬ ಘೋಷಣೆಯನ್ನು ಅವರು ಮಹಾ ಜನತೆ ಎದುರು ಮಾಡಿದ್ದಾರೆ. ಹೀಗಾಗಿ ನಾನೇ ಜವಾಬ್ದಾರ (ಮೀಚ್ ಜವಾಬ್ದಾರ್) ಎಂಬುದನ್ನು ಎಲ್ಲರೂ ಸ್ವತಃ ಅರ್ಥ ಮಾಡಿಕೊಂಡು ಕೋವಿಡ್ ತೊಲಗಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.
ಇದೇ ವೇಳೆ ಮನವಿ ಮಾಡಿರುವ ಸಿಎಂ ಠಾಕ್ರೆ, ನಾಳೆಯಿಂದ ರಾಜಕೀಯ ರ್ಯಾಲಿಗಳು, ಜಾಥಾಗಳು ಹಾಗೂ ಜನರು ಸೇರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಓದಿ: ನಾಗ್ಪುರದಲ್ಲಿ ಕೊರೊನಾ ಭೀತಿ: ಮಾ.7 ರವರೆಗೆ ಶಾಲಾ ಕಾಲೇಜು ಬಂದ್