ಕೊಟ್ಟಾಯಂ(ಕೇರಳ) : ನವಜಾತ ಶಿಶುವನ್ನು ಕೊಂದ ಆರೋಪದಲ್ಲಿ ತಾಯಿಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕಂಜಿರಪಲ್ಲಿ ಸಮೀಪದ ಇಡಕ್ಕುನ್ನಂ ಮುಕ್ಕಲಿ ಎಂಬಲ್ಲಿ ಆಕೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ತನ್ನದೇ ಮಗುವಿನ ಸಾವಿನ ಬಗ್ಗೆ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಆಕೆಯ ಮನೆಯಲ್ಲಿ ಗಂಡು ಮಗುವೊಂದರ ಮೃತದೇಹ ಪತ್ತೆಯಾಗಿತ್ತು. ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಖಚಿತಪಡಿಸಿದ್ದರು.
ಇದಾದ ನಂತರ ತನಿಖೆ ಕೈಗೊಂಡ ಪೊಲೀಸರು ತಾಯಿ ನಿಶಾಳನ್ನು ವಿಚಾರಣೆ ಮಾಡಿದಾಗ ಮಗು ಜ್ವರದಿಂದ ಬಳಲುತ್ತಿದ್ದ ಕಾರಣದಿಂದ ದೇಹದ ಉಷ್ಣತೆಯನ್ನು ತಗ್ಗಿಸುವ ಸಲುವಾಗಿ ಬಕೆಟ್ನ ನೀರಿನಲ್ಲಿ ಪಾದಗಳನ್ನು ಮುಳುಗಿಸಿದ್ದೆ, ಆಗ ಮಗು ಜಾರಿ ನೀರೊಳಗೆ ಬಿದ್ದು, ಸಾವನ್ನಪ್ಪಿದೆ ಎಂದು ಹೇಳಿಕೆ ನೀಡಿದ್ದಳು.
ಆದರೆ ಅನುಮಾನಗೊಂಡ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ತಾನೇ ಮಗುವನ್ನು ನೀರಿದ್ದ ಬಕೆಟ್ನಲ್ಲಿ ಮುಳುಗಿಸಿ ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಆರನೇ ಮಗುವಿಗೆ ಜನ್ಮ ನೀಡಿದ್ದಾಗಿ ನೆರೆಹೊರೆಯವರು ವ್ಯಂಗ್ಯವಾಡುತ್ತಾರೆ ಎಂಬ ಕಾರಣಕ್ಕೆ ಹಾಗೂ ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂಬ ಕಾರಣಕ್ಕೆ ಮಗುವನ್ನು ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಪೊಲೀಸರ ಪ್ರಕಾರ ಸುರೇಶ್, ನಿಶಾ ದಂಪತಿಗೆ ಈಗಾಗಲೇ ಐದು ಮಕ್ಕಳಿದ್ದು, ಆರನೇ ಮಗುವಿಗೆ ನಿಶಾ ಡಿಸೆಂಬರ್ 4ರಂದು (ಶನಿವಾರ) ಜನ್ಮ ನೀಡಿದ್ದಳು.
ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ದುರಂತ: ಸ್ನಾನಕ್ಕೆ ಇಳಿದಿದ್ದ ಶಿಕ್ಷಕ, ಐವರು ವಿದ್ಯಾರ್ಥಿಗಳು ನೀರುಪಾಲು