ನವ ದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪರಾಜಯಗೊಂಡ ಒಂದು ದಿನದ ನಂತರ, ಕಾಂಗ್ರೆಸ್ ಶುಕ್ರವಾರ ತನ್ನ ಕಳಪೆ ಪ್ರದರ್ಶನಕ್ಕೆ ಅಲ್ಲಿನ ರಾಜ್ಯ ನಾಯಕತ್ವವೇ ಕಾರಣ ಎಂದಿದೆ. ಇದು ಆತ್ಮಾವಲೋಕನದ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಆಮ್ ಆದ್ಮಿ ಪಕ್ಷ ಮತ್ತು ಎಐಎಂಐಎಂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಇವೆರಡೂ ಪಕ್ಷಗಳು ಆಡಳಿತ ಪಕ್ಷದ ಅನೌಪಚಾರಿಕ ಮೈತ್ರಿಯ ಪಾಲುದಾರರು ಎಂದು ಆರೋಪಿಸಿದರು. ಆದರೆ, ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಖರತೆಯ ಪ್ರಚಾರದ ಹೊರತಾಗಿಯೂ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ ಎಂದು ಅವರು ಹೇಳಿದರು.
ಗುಜರಾತ್ ಫಲಿತಾಂಶವು ನಾವು ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ತೋರಿಸಿದೆ. ಗುಜರಾತ್ ಚುನಾವಣಾ ಫಲಿತಾಂಶ ನಮ್ಮ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ನಮ್ಮ ನಿರೀಕ್ಷೆಗಿಂತ ತುಂಬಾ ಕಡಿಮೆಯಾಗಿದೆ. ಇದು ರಾಜ್ಯದಲ್ಲಿನ ಪಕ್ಷದ ಸಂಘಟನೆಯ ಕೆಟ್ಟ ಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆಗೆ ಯಾರು ಹೊಣೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್, ಸ್ಥಳೀಯ ನಾಯಕತ್ವ ಮತ್ತು ಪಕ್ಷದ ಪ್ರಚಾರದಲ್ಲಿ ಲೋಪಗಳನ್ನು ಎತ್ತಿ ತೋರಿಸಿದರು. ಗುಜರಾತ್ ರಾಜ್ಯ ಘಟಕದಲ್ಲಿ ಸಮಸ್ಯೆಗಳಿವೆ ಮತ್ತು ನಾವು ಅವುಗಳನ್ನು ಪರಿಹರಿಸುವ ಕೆಲಸ ಮಾಡಬೇಕಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಮತಗಳ ಪ್ರಮಾಣವು ಶೇ 40 ಕ್ಕೆ ಮರಳಲಿದೆ ಎಂದು ಜೈರಾಮ್ ರಮೇಶ್ ನುಡಿದರು.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ದಯನೀಯವಾಗಿ ಸೋತಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಪ್ರಧಾನಿ ವ್ಯಾಪಕ ಪ್ರಚಾರ ನಡೆಸಿದ್ದರು. ಅಷ್ಟಾದರೂ ಬಿಜೆಪಿ ಸೋತಿದೆ ಎಂದು ರಮೇಶ್ ಹೇಳಿದರು.
ಇದನ್ನೂ ಓದಿ: ಗುಜರಾತ್: ಪ್ರಮುಖ ಪ್ರತಿಪಕ್ಷದ ಸ್ಥಾನಮಾನ ಒಂದೇ ಒಂದು ಸೀಟಿನಿಂದ 'ಕೈ' ತಪ್ಪುವ ಭೀತಿ