ನವದೆಹಲಿ: ಬಿಹಾರದಲ್ಲಿನ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಈಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ಡಿಎ ಒಕ್ಕೂಟದ ಭಾಗವಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯಕಾರಿ ಅಧ್ಯಕ್ಷ ರಾಜು ತಿವಾರಿ ಹೇಳಿದ್ದಾರೆ.
ಇದರ ಜೊತೆಗೆ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಕ ಮಾಡುವ ಸಲುವಾಗಿ ಮಾತುಕತೆಗಳು ನಡೆಯುತ್ತಿವೆ ಎಂದು ರಾಜು ತಿವಾರಿ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರವಷ್ಟೇ ಚಿರಾಗ್ ಪಾಸ್ವಾನ್ ಎಲ್ಜೆಪಿಯ ಹಿರಿಯ ನಾಯಕರಾದ ರಾಜು ತಿವಾರಿ ಮತ್ತು ಸಂಜಯ್ ಪಾಸ್ವಾನ್ ಅವರನ್ನು ಕ್ರಮವಾಗಿ ಪಕ್ಷದ ರಾಜ್ಯ ಕಾರ್ಯಕಾರಿ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರು.
ಇದನ್ನೂ ಓದಿ: ಪೋಲವರಂ ಅಣೆಕಟ್ಟಿನಲ್ಲಿ ತ್ಯಾಜ್ಯ ಡಂಪಿಂಗ್ ನಿಯಂತ್ರಿಸಲು ಸಮಿತಿ ರಚನೆ
ಚಿರಾಗ್ ತಮಗೆ ಮಹತ್ವದ ಹುದ್ದೆಯನ್ನು ನೀಡಿದ ಸಲುವಾಗಿ ತಿವಾರಿ ಧನ್ಯವಾದ ಅರ್ಪಿಸಿದ್ದು, ಮಾತ್ರವಲ್ಲದೇ ಬಿಹಾರದಲ್ಲಿ ಪಕ್ಷದ ಸಂಘಟನೆಯನ್ನು ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಬಲಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಇತ್ತೀಚೆಗೆ, 206 ಎಲ್‌ಜೆಪಿ ನಾಯಕರು ಜೆಡಿಯುಗೆ ಸೇರ್ಪಡೆಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜು ತಿವಾರಿ, 206 ಮುಖಂಡರಲ್ಲಿ ಯಾರೂ ಕೂಡಾ ಪಕ್ಷದ ಪದಾಧಿಕಾರಿಗಳಲ್ಲ. ಅವರನ್ನು ಈಗಾಗಲೇ ವಜಾ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂಬ ಹೇಳಿಕೆಯನ್ನು ರಾಜು ತಿವಾರಿ ನೀಡಿದ್ದು, ಬಿಜೆಪಿ ಹೈಕಮಾಂಡ್ ಈ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.