ನವದೆಹಲಿ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಕೆಲ ರೋಹಿಂಗ್ಯಾಗಳು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಮತ್ತು ಇತರ ದೇಶಗಳಲ್ಲಿರುವ ಇಂಥದೇ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದನ್ನು ತೋರಿಸುವ, ಭದ್ರತಾ ಏಜೆನ್ಸಿಗಳು ಶೋಧಿಸಿರುವ ಅಧಿಕೃತ ಮಾಹಿತಿಗಳು ಸರ್ಕಾರದ ಬಳಿ ಇವೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಭದ್ರತಾ ಕಳವಳ ಈಗಾಗಲೇ ಇದೆ. ಮ್ಯಾನ್ಮಾರ್ನಿಂದ ಅಕ್ರಮವಾಗಿ ರೋಹಿಂಗ್ಯಾ ವಲಸಿಗರನ್ನು ಏಜೆಂಟರು ಮತ್ತು ದುಷ್ಕರ್ಮಿಗಳು ಬೆನಾಪೋಲ್ - ಹರಿದಾಸಪುರ (ಪಶ್ಚಿಮ ಬಂಗಾಳ), ಹಿಲ್ಲಿ (ಪಶ್ಚಿಮ ಬಂಗಾಳ) ಮತ್ತು ಸೋನಾಮೊರಾ (ತ್ರಿಪುರ), ಕೋಲ್ಕತಾ ಮತ್ತು ಗುವಾಹಟಿ ಮಾರ್ಗಗಳ ಮೂಲಕ ಭಾರತದೊಳಕ್ಕೆ ನುಗ್ಗಿಸುತ್ತಿರುವುದು ಇದಕ್ಕೂ ಹೆಚ್ಚಿನ ಆತಂಕದ ವಿಚಾರವಾಗಿದೆ. ಇಂಥ ಪ್ರಕರಣಗಳಿಂದ ದೇಶದ ಆಂತರಿಕ ಭದ್ರತೆಗೆ ಗಂಭೀರ ಸವಾಲು ಎದುರಾಗುತ್ತಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.
2012-2013 ರಿಂದ ಭಾರತದ ಭೂಪ್ರದೇಶಕ್ಕೆ ಗಮನಾರ್ಹ ಸಂಖ್ಯೆಯಲ್ಲಿ ರೋಹಿಂಗ್ಯಾಗಳ ಅಕ್ರಮ ಒಳಹರಿವು ಪ್ರಾರಂಭವಾಗಿದೆ ಎಂದು ಅಫಿಡವಿಟ್ನಲ್ಲಿ ಹೇಳಿದೆ.
ನೆರೆಯ ದೇಶಗಳಿಂದ ಅಕ್ರಮ ವಲಸಿಗರ ಒಳಹರಿವಿನಿಂದಾಗಿ, ಕೆಲವು ಗಡಿ ರಾಜ್ಯಗಳ ಜನಸಂಖ್ಯಾ ಸಂರಚನೆ ಈಗಾಗಲೇ ಗಂಭೀರ ಬದಲಾವಣೆಗೆ ಒಳಗಾಗಿದೆ. ಇದು ಈಗಾಗಲೇ ವಿವಿಧ ಸಂದರ್ಭಗಳಲ್ಲಿ ದೂರಗಾಮಿ ತೊಡಕುಗಳನ್ನು ಉಂಟು ಮಾಡುತ್ತಿದೆ ಮತ್ತು ಅದಕ್ಕೆ ಬೆಲೆ ತೆರಬೇಕಾಗುತ್ತಿದೆ ಮತ್ತು ದೇಶದ ಸ್ವಂತ ನಾಗರಿಕರ ಮೂಲ ಮಾನವ ಹಕ್ಕುಗಳ ಮೇಲೆ ನೇರವಾಗಿ ಹಾನಿಯನ್ನುಂಟು ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ರೋಹಿಂಗ್ಯಾಗಳ ಗಡಿಪಾರು ವಿಚಾರ: ಸುಪ್ರೀಂಗೆ ಪರಿಷ್ಕೃತ ಅಫಿಡವಿಟ್ ಸಲ್ಲಿಸಿದ ರಾಜ್ಯ ಸರ್ಕಾರ