ಜೋಧ್‌ಪುರ(ರಾಜಸ್ಥಾನ) : ಶತ್ರುಗಳ ವಾಯು ರಕ್ಷಣೆಯನ್ನು ನಾಶಪಡಿಸುವ ಸಾಮರ್ಥ್ಯವಿರುವ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಸೋಮವಾರ ಜೋಧ್‌ಪುರ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಔಪಚಾರಿಕವಾಗಿ ಸೇರ್ಪಡೆಗೊಂಡಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಇತರ ಹಿರಿಯ ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು 'ಪ್ರಚಂಡ್' ಹೆಲಿಕಾಪ್ಟರ್‌ಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಯಿತು. ನಂತರ ಜೋಧ್‌ಪುರ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಘು ಯುದ್ಧ ಹೆಲಿಕಾಪ್ಟರ್ (LCH) ಪ್ರಚಂಡದಲ್ಲಿ ಪಯಣ ಬೆಳೆಸಿದರು.
ನಂತರ ಮಾತನಾಡಿದ ಅವರು, ಹೆಚ್ಎಎಲ್ನಿಂದ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಅಡಿಯಲ್ಲಿ ಈ ಹೆಲಿಕಾಪ್ಟರ್ ತಯಾರಾಗಿದೆ. ಸುಗಮ ಮತ್ತು ಆರಾಮದಾಯಕ ಹಾರಟವನ್ನು ಮಾಡುತ್ತದೆ. ಯಾವುದೇ ಹವಾಮಾನ, ಭೂಪ್ರದೇಶದಲ್ಲಿ ಹಾರುವ ಮತ್ತು ದಾಳಿ ನಡೆಸುವ ಸಾಮರ್ಥ್ಯವನ್ನು ಈ ಪ್ರಚಂಡ ಹೊಂದಿದ್ದಾನೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅತೀ ಎತ್ತರ ಪ್ರದೇಶದಲ್ಲಿ ಹಾರಾಡುವ ಹೆಲಿಕಾಪ್ಟರ್ಗಳು ಇರದೇ ಸಮಸ್ಯೆ ಎದುರಿಸಬೇಕಾಯಿತು. ಈ ಕಾರಣಕ್ಕಾಗಿ ಸರ್ವ ಋತುಗಳಲ್ಲೂ ಹಾಗೇ ಅತೀ ಎತ್ತರಕ್ಕೆ ಹಾರಬಲ್ಲ ಲಘು ಯುದ್ಧ ಹೆಲಿಕಾಪ್ಟರ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿ ಪಡಿಸಿದೆ.
ಇದನ್ನೂ ಓದಿ : ಇರಾನ್ನಿಂದ ಚೀನಾಕ್ಕೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಬೆದರಿಕೆ.. ಪ್ರಯಾಣಿಕರ ರಕ್ಷಣೆಗೆ ಭಾರತ ಯತ್ನ