ಮುಂಬೈ: ದೇಶದ ಅತ್ಯಂತ ದೊಡ್ಡ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ತನ್ನ ಷೇರುಗಳನ್ನು ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಶೇ 8.11ರಷ್ಟು ವಿನಾಯಿತಿ ನೀಡಿ, ಪ್ರತಿ ಷೇರಿಗೆ 872 ರೂ ನಿಗದಿಪಡಿಸಿ ಇಂದು ಲಿಸ್ಟ್ ಮಾಡಿತು. ಅದೇ ರೀತಿ, ಇನ್ನೊಂದೆಡೆ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಶೇ 8.62ರಷ್ಟು ರಿಯಾಯಿತಿ ನೀಡಿ ಪ್ರತಿ ಷೇರು ಬೆಲೆಯನ್ನು 867.20ಕ್ಕೆ ಲಿಸ್ಟ್ ಮಾಡಿತು.
ಇದಕ್ಕೂ ಮೊದಲು ಎಲ್‌ಐಸಿ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ)ಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಪ್ರತಿ ಷೇರಿನ ಇಶ್ಯೂ ಬೆಲೆಯನ್ನು 949 ರೂಪಾಯಿಯಂತೆ ನಿಗದಿ ಮಾಡಿತ್ತು. ಈ ಮೂಲಕ 20,557 ಕೋಟಿ ರೂ ಮೊತ್ತವನ್ನು ಸರ್ಕಾರ ಸಂಗ್ರಹಿಸಿದೆ.
ಇಂದು ಷೇರುಗಳಲ್ಲಿ ರಿಯಾಯಿತಿ ದೊರೆತ ಹಿನ್ನೆಲೆಯಲ್ಲಿ ಎಲ್‌ಐಸಿ ಪಾಲಿಸಿದಾರರು ಮತ್ತು ಚಿಲ್ಲರೆ ಹೂಡಿಕೆದಾರರು ಕ್ರಮವಾಗಿ ಪ್ರತಿ ಷೇರನ್ನು 889 ರೂ ಮತ್ತು 904 ರೂಪಾಯಿಗಳಿಗೆ ಪಡೆದುಕೊಂಡರು. ಈ ರಿಯಾಯಿತಿಗಳನ್ನು ಪರಿಗಣಿಸಿದರೆ ಎನ್ಎಸ್‌ಇ ಮತ್ತು ಬಿಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆಯಲ್ಲಿ ಕ್ರಮವಾಗಿ 81.80 ರೂ ಮತ್ತು 77 ರೂಪಾಯಿ ಡಿಸ್ಕೌಂಟ್ ದೊರೆತಿದೆ.
ಎಲ್‌ಐಸಿಯು ತನ್ನ 22.13 ಕೋಟಿ ಷೇರುಗಳು ಅಥವಾ ಶೇ 3.5 ಪಾಲನ್ನು ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಮಾರಾಟ ಮಾಡಿದೆ. ಪ್ರತಿ ಷೇರಿನ ಬೆಲೆಯನ್ನು ಈ ಸಂದರ್ಭದಲ್ಲಿ 902-949 ರೂಗಳಿಗೆ ನಿಗದಿಪಡಿಸಿತ್ತು.
ಮೊದಲ ದಿನವೇ ದೊಡ್ಡ ಹೊಡೆತ: ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ಲಿಸ್ಟಿಂಗ್ ಆಗುತ್ತಿದ್ದಂತೆ ಹೂಡಿಕೆದಾರರು ದೊಡ್ಡ ಹೊಡೆತ ಅನುಭವಿಸಿದರು. ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಅಂದಾಜು 42,500 ಕೋಟಿ ರೂ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಗೋಧಿ ಬೆಲೆ; ಭಾರತದ ನಡೆಗೆ ಚೀನಾ ಬೆಂಬಲ