ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಪೊಲೀಸ್ ಕಸ್ಟಡಿಯಲ್ಲಿರುವಾಗ ಹತ್ಯೆಗೀಡಾದ ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಐಎಸ್‌ಐ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದ ಬಗ್ಗೆ ಹೇಳಿರುವುದಾಗಿ ತಿಳಿದುಬಂದಿದೆ. ಅತೀಕ್ ಅಶ್ರಫ್ ಹತ್ಯೆ ಸಂಬಂಧ ಅಲ್ ಖೈದಾ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದೆ. ಇದೇ ವೇಳೆ ಮಾಜಿ ಶಾಸಕ ಅಶ್ರಫ್ ಬರೆದಿದ್ದರು ಎನ್ನಲಾದ ಪತ್ರ ಇಂದು ವೈರಲ್ ಆಗಿದೆ.
ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಜೀಶಾನ್ ಕಮರ್‌ನ ಪಾಸ್‌ಪೋರ್ಟ್ ತ್ವರಿತವಾಗಿ ಮಾಡಿಕೊಡುವಂತೆ ಅಶ್ರಫ್ ಪಾಸ್‌ಪೋರ್ಟ್ ಅಧಿಕಾರಿಗೆ ಪತ್ರ ಬರೆದಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಎಟಿಎಸ್ ತಂಡ ಜೀಶಾನ್ ಕಮರ್ನನ್ನು ಬಂಧಿಸಿತ್ತು. ಜೀಶನ್ ಕಮರ್ ಪ್ರಯಾಗರಾಜ್‌ನ ಕರೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ. ತೋರಿಕೆಗೆ ಕೋಳಿ ಫಾರಂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ. ಆದರೆ, ಈತ ದೇಶವಿರೋಧಿ ಸಂಘನೆಗಳ ಜೊತೆ ಸೇರಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಸಾಕ್ಷ್ಯಾಧಾರ ದೊರೆತ ಬಳಿಕ ಎಟಿಎಸ್ ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಿತ್ತು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಇದನ್ನೂ ಓದಿ:ಅತೀಕ್ ಅಹ್ಮದ್ ಪತ್ನಿ ಇರುವ ಸ್ಥಳದ ಜಾಡು ಕಂಡು ಹಿಡಿದ ಪೊಲೀಸರು.. ಬಂಧನಕ್ಕಾಗಿ ತೀವ್ರ ಶೋಧ
ಮಾಫಿಯಾ ಅತೀಕ್ ಅಹ್ಮದ್‌ನ ಕಿರಿಯ ಸಹೋದರ ಅಶ್ರಫ್, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಜೀಶಾನ್‌ನ ಪಾಸ್‌ಪೋರ್ಟ್ ಅನ್ನು ತ್ವರಿತವಾಗಿ ಮಾಡಿಕೊಡುವಂತೆ ಪಾಸ್‌ಪೋರ್ಟ್ ಅಧಿಕಾರಿಗೆ ಶಿಫಾರಸು ಪತ್ರ ಬರೆದಿದ್ದ. ಪ್ರಯಾಗ್‌ರಾಜ್‌ನ ಪಾಸ್‌ಪೋರ್ಟ್ ಅಧಿಕಾರಿಗೆ ಕಳುಹಿಸಿದ ಪತ್ರದಲ್ಲಿ ಅಶ್ರಫ್, ಜೀಶಾನ್ ಕಮರ್ನನ್ನು ತುಂಬಾ ಹತ್ತಿರದಿಂದ ಬಲ್ಲವರಾಗಿ ಹೇಳಿದ್ದ. ಜೀಶಾನ್ ನನಗಾಗಿ ಕೆಲಸ ಮಾಡುತ್ತಾನೆ. ಜೀಶನ್ ಕಮರ್ ವಿದೇಶಕ್ಕೆ ಹೋಗಬೇಕು. ಈ ಕಾರಣಕ್ಕಾಗಿ, ಅವರ ಪಾಸ್‌ಪೋರ್ಟ್ ಅನ್ನು ಶೀಘ್ರದಲ್ಲೇ ಮಾಡಿಕೊಡಬೇಕೆಂದು ಅಶ್ರಫ್ ನವೆಂಬರ್ 13, 2017 ರಂದು ಪತ್ರ ಬರೆದಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಈಗ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:101 ಕೇಸ್ ಎದುರಿಸುತ್ತಿರುವ ಮಾಫಿಯಾ ಡಾನ್ ಅತೀಕ್ ಅಹ್ಮದ್: ಕಿಡ್ನಾಪ್ ಕೇಸ್ನಲ್ಲಿ ಜೀವಾವಧಿ ಶಿಕ್ಷೆ
ಇನ್ನು ಮಾಜಿ ಶಾಸಕ, ಸಂಸದ ಮತ್ತು ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ರನ್ನು ಪ್ರಯಾಗ್‌ರಾಜ್‌ನ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಹೇಳಿಕೆ ಪಡೆಯುವಾಗ ಪಿಸ್ತೂಲಿನಿಂದ ಮಾಫಿಯಾ ಡಾನ್ ಅತೀಕ್ ಮತ್ತು ಅಶ್ರಫ್ ತಲೆಗೆ ಗುಂಡು ಹಾರಿಸಿದ್ದರು. ದಾಳಿ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ, ಅಹಿತಕರ ಘಟನೆ ತಡೆಗೆ ಉತ್ತರ ಪ್ರದೇಶದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ:ಡಾನ್ ಅತೀಕ್ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್ಗಳಿಂದ ಹತ್ಯೆ