ಶಹಜಹಾನಪುರ(ಉತ್ತರ ಪ್ರದೇಶ): ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಸಮಾಧಿ ನಿರ್ಮಿಸಿಕೊಂಡು, ಅದರಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವವರೆಗೂ ಈ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ಈ ಪ್ರತಿಭಟನೆಯ ಮತ್ತೊಂದು ವೈಶಿಷ್ಟ್ಯವೆಂದರೆ ಇದನ್ನು ನಡೆಸುತ್ತಿರುವ ವ್ಯಕ್ತಿ ಮುಸ್ಲಿಮ್ ಆಗಿರುವುದು. ಇವರು ಮುಸ್ಲಿಮರಾದರೂ ಗೋವಿನ ಮೇಲೆ ಅಪಾರ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವುದು ಜನರ ಗಮನ ಸೆಳೆದಿದೆ.
ಹೀಗೆ ಗೋವಿಗಾಗಿ ಪ್ರತಿಭಟನೆ ನಡೆಸುತ್ತಿರುವ ವ್ಯಕ್ತಿಯ ಹೆಸರು ನವೀ ಸಲ್ಮಾನ್. ಇವರು ಖಿರ್ನಿ ಬಾಗ್ ರಾಮ್ ಲೀಲಾ ಮೈದಾನದಲ್ಲಿ ತನ್ನ ಸಮಾಧಿ ನಿರ್ಮಿಸಿ ತಲೆಯನ್ನು ಮಾತ್ರ ಹೊರಹಾಕಿ ಸಮಾಧಿಯಲ್ಲಿ ಮಲಗಿದ್ದಾರೆ. ಗೋವಿನ ಸಂತತಿಯ ಉಳಿವಿಗಾಗಿ ಅದನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂಬುದು ಇವರ ಆಗ್ರಹ.
ಈ ಬಗ್ಗೆ ಅವರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ. ಸಲ್ಮಾನ್ ಅವರ ವಿನೂತನ ಪ್ರತಿಭಟನೆ ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದಕ್ಕೂ ಮುನ್ನ ಸಲ್ಮಾನ್ ನದಿಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದರು.
ಗೋಮಾತೆಯನ್ನು ನಿರಂತರವಾಗಿ ಕೊಲ್ಲಲಾಗುತ್ತಿದೆ. ಎಲ್ಲೋ ಅಪಘಾತವಾಗಿ ಅಥವಾ ಮತ್ತೆಲ್ಲೋ ಗೋಶಾಲೆಯಲ್ಲಿ ಹಸುಗಳು ಸಾಯುತ್ತಿವೆ ಎಂದು ಹೇಳಿದ ಸಲ್ಮಾನ್, ಹಸುಗಳನ್ನು ರಕ್ಷಿಸಲು ತಾವು ಸರ್ಕಾರಕ್ಕೆ ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇರುತ್ತೇನೆ ಎನ್ನುತ್ತಾರೆ. ಆಡಳಿತವು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅವರು, ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ ಗೋ ರಕ್ಷಣೆ ಕಾಯ್ದೆ: ಗೋವುಗಳನ್ನು ರಕ್ಷಿಸಲು ಮತ್ತು ಅವುಗಳ ಹತ್ಯೆ ತಡೆಗಟ್ಟಲು, ಉತ್ತರ ಪ್ರದೇಶ ಸರ್ಕಾರ ಜೂನ್ 2020ರಲ್ಲಿ ಸುಗ್ರೀವಾಜ್ಞೆ ಜಾರಿ ಮಾಡಿದೆ. ಇದರನ್ವಯ ನಿಯಮ ಉಲ್ಲಂಘಿಸುವವರಿಗೆ ಗರಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಮೊದಲ ಅಪರಾಧಕ್ಕೆ, ಒಬ್ಬ ವ್ಯಕ್ತಿಗೆ 1 ರಿಂದ 7 ವರ್ಷಗಳ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದು. ಎರಡನೇ ಅಪರಾಧಕ್ಕೆ, ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದು. ಈ ಸುಗ್ರೀವಾಜ್ಞೆಯು ಅಸ್ತಿತ್ವದಲ್ಲಿರುವ ಕಾನೂನನ್ನು (ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ, 1955) ಹೆಚ್ಚು ದೃಢ ಮತ್ತು ಪರಿಣಾಮಕಾರಿಯಾಗಿ ಮಾಡುವ ಮತ್ತು ಗೋಹತ್ಯೆಗೆ ಸಂಬಂಧಿಸಿದ ಘಟನೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಜಾತಿ ಗಣತಿ ಭರವಸೆ