ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹಾರದ ಚೆಕಿ ದುಡೂ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಯೋತ್ಪಾದಕರು ಮತ್ತು ಪೊಲೀಸ್ ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ. ಈ ದಾಳಿಯಲ್ಲಿ ಹೈಬ್ರಿಡ್ ಉಗ್ರ ಸಜ್ಜದ್ ತಂತ್ರೆ ಹತನಾಗಿದ್ದಾನೆ.
ಬೆಳಗ್ಗೆ ಭದ್ರತಾ ಪಡೆ ತಂಡವು ಶಂಕಿತ ಉಗ್ರರ ಅಡಗುತಾಣದ ಕಡೆಗೆ ತಲುಪುತ್ತಿದ್ದಂತೆ ಗುಂಡಿನ ದಾಳಿ ಶುರುವಾಗಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕುಲ್ಗಾಮ್‌ನ ಲಷ್ಕರ್ ಉಗ್ರ ಸಜ್ಜದ್ ತಂತ್ರೆ ಹತನಾಗಿದ್ದಾನೆ.
ಸಜ್ಜದ್ ತಂತ್ರೆ ಈ ಹಿಂದೆ ಲಷ್ಕರ್ ಸಂಘಟನೆಯಲ್ಲಿದ್ದ. ನ.13 ರಂದು ಅನಂತ್‌ನಾಗ್‌ನ ಬಿಜ್‌ಬೆಹರಾದಲ್ಲಿ ರಖ್ಮೋಮೆನ್‌ನಲ್ಲಿ ಇಬ್ಬರು ಕಾಶ್ಮೀರೇತರ ಕಾರ್ಮಿಕರ ಮೇಲೆ ಈತ ದಾಳಿ ನಡೆಸಿದ್ದಾನೆ. ಅವರಲ್ಲಿ ಒಬ್ಬ ಗಾಯಗೊಂಡ ಕಾರ್ಮಿಕ ಛೋಟಾ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನ.18 ರಂದು ಮೃತಪಟ್ಟಿದ್ದನು.
ಮಹಿಳೆಯರು ಮತ್ತು ಮಕ್ಕಳು, ಹೊರಗಿನ ಕಾರ್ಮಿಕರು ಸೇರಿದಂತೆ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಕಣಿವೆಯಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಉಗ್ರವಾದಿಗಳು ಮಾಡುತ್ತಿದ್ದಾರೆ. ಇದರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.
ಇದನ್ನೂಓದಿ:ಮಂಗಳೂರು ಆಟೋ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್ ಸೂದ್