ಉದಯಪುರ(ರಾಜಸ್ಥಾನ): ಚಿರತೆಯೊಂದು ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಉದಯಪುರದಲ್ಲಿ ಶುಕ್ರವಾರ ನಡೆದಿದೆ. ಹಲವು ಗಂಟೆಗಳ ಕಾಲ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸುಮಾರು 12 ಗಂಟೆಗಳ ಬಳಿಕ ವಿದ್ಯಾರ್ಥಿನಿಯರು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಹಿರಾನ್ ಮ್ಯಾಗ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪರಮಾತ್ಮ ಬಾಲಕಿಯರ ಹಾಸ್ಟೆಲ್‌ಗೆ ಬೆಳಿಗ್ಗೆ ಚಿರತೆ ಪ್ರವೇಶಿಸಿತು. ಈ ವೇಳೆ, ಸುಮಾರು 15 ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿದ್ದರು. ಭಯಭೀತಿರಾದ ಬಾಲಕಿಯರು ತಮ್ಮ ಕೊಠಡಿಗಳಿಗೆ ಬೀಗ ಹಾಕಿಕೊಂಡಿದ್ದರು. ಆದರೆ, ಅಷ್ಟರಲ್ಲಿ ಹಾಸ್ಟೆಲ್‌ನಲ್ಲಿ ಅಡುಗೆ ಮಾಡುತ್ತಿದ್ದ ಯುವಕನೊಬ್ಬ ಮೆಟ್ಟಿಲುಗಳನ್ನು ಹತ್ತಿ ಬಂದಿದ್ದಾನೆ. ಅಲ್ಲಿದ್ದ ಚಿರತೆ ಆತನ ಮೇಲೆ ಹಿಂದಿನಿಂದ ದಾಳಿ ಮಾಡಿದೆ. ಇದರಿಂದ ಮತ್ತಷ್ಟು ಆತಂಕದ ವಾತಾವರಣದ ನಿರ್ಮಾಣವಾಗಿ ಸಂಚಲನ ಉಂಟಾಗಿತ್ತು.
11 ಗಂಟೆ ಸುಮಾರಿಗೆ ಹಿರಾನ್ ಮ್ಯಾಗ್ರಿ ಠಾಣೆಗೆ ಹಾಸ್ಟೆಲ್‌ಗೆ ಚಿರತೆ ಪ್ರವೇಶಿಸಿದ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಅರಣ್ಯ ಇಲಾಖೆ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಚಿರತೆ ಹಾಸ್ಟೆಲ್‌ನ ಮೂರನೇ ಮಹಡಿ ಏರಿ ಅವಿತು ಕುಳಿತುಕೊಂಡಿತ್ತು. ಹೀಗಾಗಿ ಅದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಹರಸಾಹಸಪಡಬೇಕಾಯಿತು. ಜೊತೆಗೆ ಹಾಸ್ಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಅದರ ಜಾಡು ಕಂಡುಹಿಡಿದ್ದಾರೆ.
ಮೊದಲಿಗೆ ಹಾಸ್ಟೆಲ್ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ. ಬಳಿಕ ಗಂಟೆಗಳ ಕಾಲ ಕಾರ್ಯಾಚರಣೆ ಕೈಗೊಂಡು ಚಿರತೆ ಸೆರೆಹಿಡಿದ್ದಾರೆ. ಬಾಲಕಿಯರ ಹಾಸ್ಟೆಲ್‌ನಲ್ಲಿ ಸುಮಾರು 32 ಕೊಠಡಿಗಳಿದ್ದು, ಇದರಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸಿಸುತ್ತಿದ್ದಾರೆ. ಅವರು ಚಿರತೆ ಪ್ರವೇಶದಿಂದ ಹೆದರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಷಾರಾಮಿ ಫ್ಲಾಟ್‌ನಲ್ಲಿ ಕಾಣಿಸಿಕೊಂಡ ಚಿರತೆ: ಮತ್ತೊಂದೆಡೆ, ಲೂಧಿಯಾನದಲ್ಲೂ ಇಂತಹದ್ದೇ ಘಟನೆ ವರದಿಯಾಗಿದೆ. ಕಳೆದ ತಡರಾತ್ರಿ ಐಷಾರಾಮಿ ಸೆಂಟ್ರಾ ಗ್ರೀನ್ ಫ್ಲಾಟ್‌ನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ವಿಷಯ ತಿಳಿದ ಪೊಲೀಸ್ ಹಾಗೂ ಅರಣ್ಯ ಇಲಾಖೆ ತಂಡಗಳು ಸ್ಥಳಕ್ಕೆ ಧಾವಿಸಿ, ಹುಡುಕಾಟ ಆರಂಭಿಸಿದ್ದವು.
ಚಿರತೆ ಓಡಾಟದ ದೃಶೃಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗೋಡೆ ಹತ್ತಿ ಪ್ರವೇಶಿಸಿರುವುದು ಕಂಡುಬಂದಿದೆ. ಚಿರತೆ ಕಾಣಿಸಿಕೊಂಡ ಪರಿಣಾಮ ಫ್ಲಾಟ್‌ನಲ್ಲಿ ಒಳಗೆ ಮತ್ತು ಹೊರಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಎಂದು ಸೆಂಟ್ರಾ ಗ್ರೀನ್‌ನ ಕಾರ್ಯದರ್ಶಿ ಮೊಹಿಂದರ್ ಹೇಳಿದರು. ಮತ್ತೊಂದೆಡೆ, ಚಿರತೆ ಹುಡುಕಾಟ ನಡೆಸಿದ್ದು, ಇನ್ನೂ ಪತ್ತೆಯಾಗಿಲ್ಲ. ನೆಲಮಾಳಿಗೆಯೊಳಗೆ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ನಿವಾಸಿಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ದಿಢೀರ್ ಹುಲಿ ಪ್ರತ್ಯಕ್ಷ, ಅಚ್ಚರಿ ರೀತಿ ಪಾರಾದ ವ್ಯಕ್ತಿ: ವಿಡಿಯೋ