ಮಹಾರಾಜ್ಗಂಜ್: ಚಿರತೆ ಹಿಡಿಯಲು ಬಂದ ಅರಣ್ಯ ಅಧಿಕಾರಿಗಳ ಸೇರಿದಂತೆ ನಾಲ್ವರ ಮೇಲೆ ದಾಳಿ ಮಾಡಿರುವ ಘಟನೆ ಇಲ್ಲಿನ ಛಾತಿರಾಮ್ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ: ಇಲ್ಲಿನ ನಿವಾಸಿ ವಿಂದ್ರೇಶ್ ಸಿಂಗ್ ಗುರುವಾರ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದರು. ಆಗ ಗೋಧಿ ಬೆಳೆಯ ಮಧ್ಯದಲ್ಲಿ ಅಡಗಿ ಕುಳಿತಿದ್ದ ಚಿರತೆ ಸಿಂಗ್ ಮೇಲೆ ಎರಗಿದೆ. ಸಿಂಗ್ ಚಿರತೆಯಿಂದ ಹೇಗೋ ಬಚಾವ್ ಆಗಿ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಗ್ರಾಮಸ್ಥರು ಗೋರಖ್ಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಚಿರತೆ ದಾಳಿಯಿಂದ ಕಂಗಾಲಾಗಿದ್ದ ಛಾತಿರಾಮ್ ಗ್ರಾಮಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಈ ವೇಳೆ, ಸಿಂಗ್ ಚಿರತೆ ದಾಳಿ ಮಾಡಿರುವ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಆಗ ಚಿರತೆ ಗೋಧಿ ಬೆಳಗಳ ಮಧ್ಯೆದಿಂದ ಓಡಿ ಬಂದು ಜನರ ಗುಂಪಿನ ಮೇಲೆ ಎರಗಿದೆ. ಈ ವೇಳೆ ಅರಣ್ಯ ಅಧಿಕಾರಿ ಸೇರಿದಂತೆ ನಾಲ್ವರು ಮೇಲೆ ಚಿರತೆ ದಾಳಿ ಮಾಡಿ ಪರಾರಿಯಾಗಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಸ್ಥಳದಲ್ಲಿ ಬೋನ್ ಇಟ್ಟಿದ್ದು, ಗ್ರಾಮಸ್ಥರಿಗೆ ಇತ್ತ ಸುಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ಆದಷ್ಟುಬೇಗ ಚಿರತೆ ಸೆರೆ ಹಿಡಿಯಲಾಗುವುದೆಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.