ನವದೆಹಲಿ: ಹನ್ನೆರಡನೇ ತರಗತಿಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷದ ನೀತಿ ಬಿಡುವುದಿದ್ದರೆ ಅದಕ್ಕೆ ಸರಿಯಾದ ಕಾರಣ ನೀಡಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ತಿಳಿಸಿದೆ. ಕಳೆದ ವರ್ಷ ಅಳವಡಿಸಿಕೊಂಡ ನೀತಿಯನ್ನು ಈ ವರ್ಷವೂ ಅಳವಡಿಸಿಕೊಳ್ಳಬಹುದು ಎಂದು ಉನ್ನತ ನ್ಯಾಯಾಲಯ ಸೂಚಿಸಿದೆ.
ಕೊರೊನಾ ಎರಡನೇ ಅಲೆ ಭೀತಿಯ ನಡುವೆ ಸಿಬಿಎಸ್‌ಇ ಮತ್ತು ಐಸಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಆಕ್ಷೇಪ ಕೇಳಿ ಬರುತ್ತಿದೆ. ಈ ಹಂತದಲ್ಲಿ ಪರೀಕ್ಷೆ ರದ್ದತಿ ಮಾಡುವ ಬಗ್ಗೆ ಇನ್ನು ಎರಡು ದಿನಗಳೊಳಗೆ ಮಾಹಿತಿ ನೀಡಲಾಗುವುದು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು
ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಂಡಳಿಗಳು ನಡೆಸುವ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿದ್ದ ಪೀಠ, ‘ನೀವು ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಿ. ಅದಕ್ಕೆ ನೀವು ಅರ್ಹರು. ಒಂದು ವೇಳೆ ಹಿಂದಿನ ವರ್ಷದ ನೀತಿಯನ್ನು ರದ್ದುಗೊಳಿಸುವುದಿದ್ದರೆ, ಅದಕ್ಕೆ ಸರಿಯಾದ ಕಾರಣವನ್ನು ನೀಡಬೇಕು’ ಎಂದು ಹೇಳಿದರು.
ಈ ಕುರಿತು ಸಂಕ್ಷಿಪ್ತ ವಿಚಾರಣೆಯ ನಂತರ ಉನ್ನತ ನ್ಯಾಯಾಲಯವು ಪ್ರಕರಣವನ್ನು ಗುರುವಾರ (ಜೂನ್ 3) ಕ್ಕೆ ಮುಂದೂಡಿದೆ.
ಇಂದಿನ ಕೊರೊನಾ ಸ್ಥಿತಿಗತಿ ನಡುವೆ ಸಿಬಿಎಸ್‌ಇ 12ನೇ ತರಗತಿ ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆ (ಸಿಐಎಸ್‌ಸಿಇ)ಗಳನ್ನು ರದ್ದುಪಡಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.