ಗಾಜಿಯಾಬಾದ್: ಮಹಾಮಾರಿ ಕೊರೊನಾ ವೈರಸ್ ಹಾವಳಿ ದೇಶದಲ್ಲಿ ಜೋರಾಗಿದ್ದು, ನಿತ್ಯ ಸಾವಿರಾರು ಜನರು ಡೆಡ್ಲಿ ವೈರಸ್ಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ವೋರ್ವ ಇದಕ್ಕೆ ಬಲಿಯಾಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 29 ವರ್ಷದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದು, ಅವರಿಗೆ ಏಪ್ರಿಲ್ 15ರಂದು ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ನಾಲ್ಕು ದಿನದ ಬಳಿಕ ಅಂಕಿತ್ ಚೌಧರಿ ಉತ್ತರ ಪ್ರದೇಶದ ಆಸ್ಪತ್ರೆಗೆ ದಾಖಲಾಗಿದ್ದರು.
ದೆಹಲಿಯಲ್ಲಿ ಅವರಿಗೆ ಬೆಡ್ ಸಿಗದ ಕಾರಣ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಸದ ತೊಂದರೆಗೊಳಗಾಗಿದ್ದ ಕಾರಣ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು, ಇಂದು ಬೆಳಗ್ಗೆ ಸಾವನ್ನಪ್ಪಿದ್ದು, ಕೊನೆ ಕ್ಷಣದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಕೊರೊನಾದಿಂದ ಗುಣಮುಖ: ಡೆಲ್ಲಿ ತಂಡ ಸೇರಿಕೊಂಡ ಆಲ್ರೌಂಡರ್ ಅಕ್ಸರ್ ಪಟೇಲ್!
ಸಬ್ ಇನ್ಸ್‌ಪೆಕ್ಟರ್ ಅಂಕಿತ್ ಚೌಧರಿ ಯುಪಿಯ ಶಾಮ್ಲಿ ನಿವಾಸಿಯಾಗಿದ್ದರು. ಆಸ್ಪತ್ರೆಯಲ್ಲಿ ಅವರಿಗೆ ಹಚ್ಚಿನ ಚಿಕಿತ್ಸೆಗಾಗಿ ಪ್ಲಾಸ್ಮಾ ಅವಶ್ಯಕತೆ ಇತ್ತು. ಆದರೆ, ಅದು ಸರಿಯಾದ ಸಮಯಕ್ಕೆ ಲಭ್ಯವಾಗಿಲ್ಲ. 2015 ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಆರಂಭಿಸಿದ್ದರು. ಮೃತ ಅಂಕಿತ್ ಚೌಧರಿಗೆ ಹೆಂಡತಿ ಹಾಗೂ ಎರಡು ವರ್ಷದ ಹೆಣ್ಣು ಮಗುವಿದ್ದು, ದೆಹಲಿಯಲ್ಲಿ ವಾಸವಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂಕಿತ್ ಚೌಧರಿ ಸಧ್ಯ ಭರತ್ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.