ಪ್ರತಾಪಗಢ(ಉತ್ತರ ಪ್ರದೇಶ): ಮನುಷ್ಯರು, ಮುದ್ದಿನ ಪ್ರಾಣಿಗಳು ಸಾವನ್ನಪ್ಪಿದಾಗ ಅಂತಿಮ ವಿಧಿ - ವಿಧಾನ ಮಾಡುವುದು, ಆತ್ಮಶಾಂತಿಗೋಸ್ಕರ ತಿಥಿ ಕಾರ್ಯಕ್ರಮ ಮಾಡಿ ನೂರಾರು ಜನರಿಗೆ ಊಟ ಹಾಕಿಸುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೋರ್ವ ವೈದ್ಯ ಕೋಳಿ ಸಾವನ್ನಪ್ಪಿರುವುದಕ್ಕಾಗಿ ಅದರ ಆತ್ಮಕ್ಕೆ ಶಾಂತಿ ಕೋರಿ ಔತಣಕೂಟ ಏರ್ಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿರುವ 5 ವರ್ಷದ ಕೋಳಿಯ ಆತ್ಮಕ್ಕೆ ಶಾಂತಿ ಕೋರಿ ವೈದ್ಯ 13ನೇ ದಿನದಂದು ತಿಥಿ ಮಾಡಿದ್ದು, 500 ಮಂದಿಗೆ ಔತಣಕೂಟ ಏರ್ಪಡಿಸಿದ್ದರು.
ಪ್ರತಾಪ್ಗಢ ಜಿಲ್ಲೆಯ ಫತಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಹದೌಲ್ ಕಾಲಾ ಗ್ರಾಮದ ನಿವಾಸಿ ಡಾ. ಶಾಲಿಕ್ರಮ್ ಸರೋಜ್ ಕ್ಲಿನಿಕ್ ನಡೆಸುತ್ತಿದ್ದರು. ಅವರ ಮನೆಯಲ್ಲಿ ಮೇಕೆ, ಹುಂಜ ಸಾಕಿದ್ದರು. ಇಡೀ ಕುಟುಂಬದ ಸದಸ್ಯರು ಕೋಳಿಯನ್ನ ತುಂಬಾ ಪ್ರೀತಿಸುತ್ತಿದ್ದರು. ಅದಕ್ಕೆ ಲಾಲಿ ಎಂದು ಹೆಸರಿಟ್ಟಿದ್ದರು.
ಜುಲೈ 8ರಂದು ಡಾ.ಶಾಲಿಕ್ರಮ್ ಅವರ ಮೇಲೆ ಮೇಲೆ ಶ್ವಾನವೊಂದು ದಾಳಿ ಮಾಡಿದೆ. ಈ ವೇಳೆ, ನಾಯಿ ಜೊತೆ ಲಾಲಿ ಸಹ ಸಂಘರ್ಷಕ್ಕೆ ಇಳಿದಿದೆ. ಈ ವೇಳೆ ಅದು ಗಂಭೀರವಾಗಿ ಗಾಯಗೊಂಡಿದೆ.
ಇದನ್ನೂ ಓದಿರಿ: ಪನ್ನಾದಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು ಪತ್ತೆ.. ಹರಾಜು ಹಾಕಲು ನಿರ್ಧಾರ
ಜುಲೈ 9ರ ಸಂಜೆ ಹುಂಜ ಲಾಲಿ ಸಾವನ್ನಪ್ಪಿದೆ. ಇದಾದ ಬಳಿಕ ಮನೆಯ ಸಮೀಪದಲ್ಲಿ ಹೂಳಲಾಗಿದೆ. ಇದಾದ ಬಳಿಕ ಅದರ ಆತ್ಮಕ್ಕೆ ಶಾಂತಿ ಸಿಗಲೆಂದು ಹದಿಮೂರನೇ ದಿನದಂದು ತಿಥಿ ಮಾಡಿದ್ದಾರೆ. ಈ ವೇಳೆ ವೈದ್ಯರು ತಲೆ ಸಹ ಬೋಳಿಸಿಕೊಂಡಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ಔತಣಕೂಟ ಏರ್ಪಡಿಸಲಾಗಿದೆ. ಇದಕ್ಕೋಸ್ಕರ 40 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.