ಜಮ್ಮು, ಜಮ್ಮುಕಾಶ್ಮೀರ : ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆಗೆ ಸಂಬಂಧಿಸಿದಂತೆ ಕಣಿವೆನಾಡಿನಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಭಯೋತ್ಪಾದಕರ ಗುಂಡಿಗೆ ಬಲಿಯಾದ ರಾಹುಲ್ ಭಟ್ ಅಂತ್ಯಸಂಸ್ಕಾರದ ವೇಳೆ ಭಾರಿ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಈ ಪ್ರತಿಭಟನೆಗಳಲ್ಲೇ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧದ ಘೋಷಣೆಗಳು ಕೇಳಿ ಬಂದಿವೆ. ಪ್ರತಿಭಟನೆ ಸ್ವಲ್ಪ ಸಮಯ ಗದ್ದಲಕ್ಕೆ ತಿರುಗಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಮತ್ತೊಂದೆಡೆ ರಾಹುಲ್ ಭಟ್ ಅಂತ್ಯಸಂಸ್ಕಾರ ನೆರವೇರಿದೆ.
ಜಮ್ಮುವಿನ ಬಂತಾಲಬ್ ಎಂಬಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸ್ಥಳದಲ್ಲಿ ಜಮ್ಮುವಿನ ಎಡಿಜಿಪಿ ಮುಕೇಶ್ ಸಿಂಗ್, ವಿಭಾಗೀಯ ಆಯುಕ್ತರಾದ ರಮೇಶ್ ಕುಮಾರ್, ಉಪ ಆಯುಕ್ತ ಅವ್ನಿ ಲವಾಸಾ ಹಾಜರಿದ್ದರು. ಗುರುವಾರ ಬದ್ಗಾಮ್‌ನಲ್ಲಿರುವ ಚದೂರಾ ತಹಸಿಲ್ ಕಚೇರಿಯಲ್ಲಿ ರಾಹುಲ್ ಭಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಅವರನ್ನು ಶ್ರೀನಗರದ ಎಸ್‌ಎಂಹೆಚ್‌ಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ರಾಹುಲ್ ಭಟ್ ಅವರ ಅಂತ್ಯಸಂಸ್ಕಾರದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರು. ರಾಹುಲ್ ಭಟ್ ಹತ್ಯೆಗೆ ಸ್ಥಳೀಯರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಕಾಶ್ಮೀರಿ ಹಿಂದೂಗಳಿಗೆ ಭದ್ರತೆಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಎಎನ್‌ಐ ಜೊತೆ ಮಾತನಾಡಿದ ಸ್ಥಳೀಯರೊಬ್ಬರು, ಕಾಶ್ಮೀರಿ ಪಂಡಿತರಿಗೆ ಒಂದೇ ಸ್ಥಳದಲ್ಲಿ ಆಶ್ರಯ ನೀಡಬೇಕು.
ಭದ್ರತೆಯ ಜೊತೆಗೆ ಹತ್ತಿರದ ಪ್ರದೇಶಗಳಲ್ಲಿ ಕೆಲಸ ನೀಡಬೇಕು. ಆಗ ಮಾತ್ರ ಅವರು ಸುರಕ್ಷಿತವಾಗಿರುತ್ತಾರೆ. ರಾಹುಲ್ ಭಟ್ ಅವರ ಹತ್ಯೆ ಉದ್ದೇಶಿತ ಹತ್ಯೆಯಾಗಿದೆ. ಕಾಶ್ಮೀರಿ ಪಂಡಿತರು ಮತ್ತೆ ಕಾಶ್ಮೀರಕ್ಕೆ ಮರಳುವುದನ್ನು ತಡೆಯಲು ಈ ರೀತಿ ಬೆದರಿಕೆ ಒಡ್ಡಲಾಗುತ್ತಿದೆ ಎಂದಿದ್ದಾರೆ.
ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರಕ್ಕೆ ಕಳುಹಿಸಬಾರದು. ಜಮ್ಮುವಿನಲ್ಲಿಯೇ ಸುರಕ್ಷಿತ ಶಿಬಿರಗಳಲ್ಲಿ ಆಶ್ರಯ ನೀಡಬೇಕು ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ರಾಹುಲ್ ಭಟ್ ಹತ್ಯೆ ನಂತರ ಇಡೀ ಸಮುದಾಯ ಆಘಾತಕ್ಕೊಳಗಾಗಿದೆ. ನೌಕರರನ್ನು ಕಾಶ್ಮೀರಕ್ಕೆ ವಾಪಸ್ ಕಳುಹಿಸಬಾರದು, ಅವರು ಜಮ್ಮುವಿನ ಸುರಕ್ಷಿತ ಸ್ಥಳಗಳಲ್ಲಿರುವಂತೆ ನೋಡಿಕೊಳ್ಳಬೇಕು.
ಭಯೋತ್ಪಾದಕರ ಅಂತ್ಯವಾಗುವರೆಗೆ ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಹಿಂತಿರುಗಬಾರದು. ಒಂದು ವೇಳೆ ಬಂದರೆ ಅವರಿಗೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಹುಲ್ ಭಟ್ ಹತ್ಯೆಯನ್ನು ಖಂಡಿಸಿದ್ದಾರೆ. ಬದ್ಗಾಮ್‌ನಲ್ಲಿ ಭಯೋತ್ಪಾದಕರು ರಾಹುಲ್ ಭಟ್ ಅವರ ಬರ್ಬರ ಹತ್ಯೆ ಮಾಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ.
ಈ ಹೇಯ ಭಯೋತ್ಪಾದನಾ ದಾಳಿಯ ಹಿಂದೆ ಇರುವವರಿಗೆ ಶಿಕ್ಷೆಯಾಗುತ್ತದೆ. ಈ ದುಃಖದ ಸಮಯದಲ್ಲಿ ರಾಹುಲ್ ಭಟ್ ಕುಟುಂಬದ ಪರವಾಗಿ ಸರ್ಕಾರ ನಿಂತುಕೊಳ್ಳುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಕಚೇರಿ ತಿಳಿಸಿದೆ. ರಾಹುಲ್ ಭಟ್ ಹತ್ಯೆಯಲ್ಲಿ ಇಬ್ಬರು ಭಯೋತ್ಪಾದಕರು ಭಾಗಿಯಾಗಿದ್ದು, ಕೃತ್ಯಕ್ಕೆ ಪಿಸ್ತೂಲ್ ಬಳಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೇದಾರನಾಥ: ಭಕ್ತರ ನಿಯಂತ್ರಿಸಲು ಎನ್ಡಿಆರ್ಎಫ್, ಐಟಿಬಿಪಿ ತಂಡ ನಿಯೋಜನೆ