ಆಗ್ರಾ(ಉತ್ತರ ಪ್ರದೇಶ): ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಪ್ರತಿನಿಧಿಗಳಿಗಾಗಿ ವಿಶೇಷ ಲೇಸರ್ ಸೌಂಡ್ ಅಂಡ್ ಲೈಟ್ ಶೋವನ್ನು ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ಆಗ್ರಾ ಕೋಟೆ ದಿವಾನ್-ಇ-ಆಮ್ನಲ್ಲಿ ಈ ವಿಶೇಷ ಕಾರ್ಯವನ್ನು ನಡೆಸಲಾಯಿತು. ಇನ್ನು, ಈ ಕಾರ್ಯಕ್ರಮ ನಡೆಸಿದ ಹಿನ್ನೆಲೆ ಪ್ರಾಜೆಕ್ಷನ್ ಮ್ಯಾಪಿಂಗ್ ಮತ್ತು ಸಂಗೀತ ಕಾರ್ಯಕ್ರಮದಿಂದಾಗಿ ದಿವಾನ್- ಇ- ಆಮ್ ಕೋಟೆಯ ಮೇಲ್ಛಾವಣಿ ಹಾನಿಗೊಂಡಿರುವುದು ಪ್ರಾಥಮಿಕ ಫಲಿತಾಂಶದಲ್ಲಿ ತಿಳಿದು ಬಂದಿದೆ.
ಯುನೆಸ್ಕೋ ಮಾರ್ಗದರ್ಶನದ ಅನುಸಾರ, ಪಾರಂಪರಿಕ ಸ್ಥಳಗಳಲ್ಲಿ ಧ್ವನಿ ಮಿತಿ 40 ಡೆಸಿಬಲ್ ಇರಬೇಕು. ಈ ಮಾರ್ಗದರ್ಶನವನ್ನು ಮೀರಿ ಕಾರ್ಯಕ್ರಮಗದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ಸ್(ಶಬ್ದದ) ಮಟ್ಟ ಹೆಚ್ಚಾಗಿರುವುದು ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು ಬಿಡಲು ಕಾರಣವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.
ಮೂಲಗಳ ಪ್ರಕಾರ, ಕೋಟೆಯ ಮೇಲ್ಛಾವಣಿಯಲ್ಲಿ 2 ರಿಂದ 6ಎಂಎಂ ಹಾನಿ ಕಂಡು ಬಂದಿದೆ. ಬಿರುಕು ಕಂಡು ಬಂದ ಜಾಗದಲ್ಲಿ ಪ್ಲಾಸ್ಟರ್ಗಳ ತೇಪೆಯನ್ನು ಹಾಕಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಬಿರುಕು ಕಂಡು ಬರುತ್ತಿದ್ದಂತೆ ಎಚ್ಚೆತ್ತಿದ್ದು, ಕೋಟೆ ಸುತ್ತ ಹಾನಿಗೊಂಡ ಪ್ರದೇಶಗಳನ್ನು ಬಂದ್ ಮಾಡಲಾಗಿದೆ. ಈ ಪ್ರದೇಶದ ಸುತ್ತ ಪ್ರವಾಸಿಗರು ಹೋಗದಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಪುರಾತತ್ವ ಇಲಾಖೆ ಆರ್ಕಲಾಜಿಸ್ಟ್ ರಾಜ್ ಕುಮಾರ್ ಪಟೇಲ್ ಈ ಕುರಿತು ಮಾತನಾಡಿ, ಕೋಟೆಯ ಪರಿಶೀಲನೆ ವೇಳೆ ಹಾನಿಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಜಿ 20 ಪ್ರತಿನಿಧಿಗಳಿಗಾಗಿ ಫೆ. 11ರಂದು ದಿವನ್-ಇ-ಆಮ್ ಕೋಟೆಯ ಆವರಣದಲ್ಲಿ ಲೇಸರ್ ಸೌಂಡ್ ಮತ್ತು ಲೈಟ್ ಶೋವನ್ನು ಆಯೋಜಿಸಲಾಗಿತ್ತು. ಇದೀಗ ಈ ಹಾನಿಯೂ ಕಾರ್ಯಕ್ರಮದ ಬಳಿಕ ಕಂಡು ಬಂದಿದ್ಯಾ, ಅಥವಾ ಕಾರ್ಯಕ್ರಮಕ್ಕೆ ಮುಂಚೆಯೇ ಮೇಲ್ಛಾವಣಿಗಳಲ್ಲಿ ಬಿರುಕು ಇತ್ತಾ ಎಂಬುದರ ಪತ್ತೆಗೆ ಕಾರ್ಯ ನಡೆಸಲಾಗಿದೆ ಎಂದರು.
ಆಗ್ರಾ ಕೋಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ. 10ರಂದು ರಿಹರ್ಸಲ್ ಅನ್ನು ಕೂಡ ನಡೆಸಲಾಗಿತ್ತು. ರಿಹರ್ಸಲ್ ವೇಳೆ ಹೆಚ್ಚಿನ ಧ್ವನಿಮಟ್ಟವನ್ನು ಬಳಕೆ ಮಾಡಲಾಗಿದೆ. ಈ ಹಿನ್ನಲೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ರಿಹರ್ಸಲ್ಅನ್ನು ಮಧ್ಯಾಹ್ನ 12 ರಿಂದ 4 ಗಂಟೆ ಅವಧಿಯಲ್ಲಿ ಮಾಡಲಾಗಿದ್ದು, ಹೆಚ್ಚಿನ ಧ್ವನಿ ಮಟ್ಟ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋದಲ್ಲಿ ಜಿ20 ಶೃಂಗಸಭೆಯ ಅಂಗವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೊದಲ ಡಿಇಡಬ್ಲ್ಯೂಜಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಜಿ 20 ಸದಸ್ಯರು ಒಂಬತ್ತು ಅತಿಥಿ ದೇಶಗಳ ಪ್ರತಿನಿಧಿಗಳು ಮತ್ತು ಐದು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಿರುತ್ತಾರೆ.
70 ವಿದೇಶಿ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಹಲವಾರು ಸಭೆ ಮತ್ತು ಸೆಮಿನಾರ್ ನಡೆಸಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಸಲಾಗಿದೆ. ಈ ಕಾರ್ಯಾಗಾರದಲ್ಲಿ ಕೇಂದ್ರದ ಡಿಜಿಟಲ್ ಇಂಡಿಯಾ ಅಭಿಯಾನವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೇಗೆ ದೇಶದಲ್ಲಿ ಪರಿವರ್ತನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದರ ಕುರಿತು ಚರ್ಚಿಸಲಾಯಿತು.
ಇದನ್ನೂ ಓದಿ: ಶಿಕ್ಷಕರ ಅದಲು ಬದಲಿ ಆಟ.. ತಾಯಿಯ ಬದಲಿಗೆ ಮಗ.. ಸಹೋದರನ ಬದಲಿಗೆ ಸಹೋದರಿ ಕೆಲಸ!