ಹರಿದ್ವಾರ(ಉತ್ತರಾಖಂಡ) : ಬುದ್ಧ ಪೂರ್ಣಿಮೆ ಹಿನ್ನೆಲೆ ಹರಿದ್ವಾರದ ಹಲವಾರು ಗಂಗಾ ಘಾಟ್‌ಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಶುಭ ದಿನವಾದ ಇಂದು ಜನರು ಪವಿತ್ರ ಸ್ನಾನ ಮಾಡುತ್ತಿದ್ದರು. ಸೋಮವಾರ ನಸುಕಿನಿಂದಲೇ ಹರ್ ಕಿ ಪೌರಿಗೆ ದೇಶದ ನಾನಾ ಭಾಗಗಳಿಂದ ಯಾತ್ರಾರ್ಥಿಗಳು ಹರಿದು ಬರುತ್ತಿದ್ದಾರೆ.
ಪುರಾಣಗಳ ಪ್ರಕಾರ, ಬುದ್ಧ ಪೂರ್ಣಿಮೆಯಂದು ಪವಿತ್ರ ಸ್ನಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಪುಣ್ಯ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಹರ್ ಕಿ ಪೌರಿಗೆ ಬಂದಿದ್ದಾರೆ. ಇದುವರೆಗೆ ಕನಿಷ್ಠ ನಾಲ್ಕು ಲಕ್ಷ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆಂಧ್ರಪ್ರದೇಶದ ವ್ಯಾಪಾರಿಯಿಂದ ಅಪರೂಪದ ಫೌಂಟೇನ್ ಪೆನ್ನುಗಳ ಸಂಗ್ರಹ
ಪವಿತ್ರ ಸ್ನಾನ ಮಾಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಹರಿದ್ವಾರ ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಮೇಳವನ್ನು (ಜಾತ್ರೆ) ಆರು ವಲಯಗಳಾಗಿ ಮತ್ತು 18 ವಲಯಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ, ಟ್ರಾಫಿಕ್ ದಟ್ಟಣೆಯನ್ನು ತಡೆಯಲು ನಗರಕ್ಕೆ ಭಾರೀ ವಾಣಿಜ್ಯ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಚಾರ್‌ಧಾಮ್ ಯಾತ್ರಾರ್ಥಿಗಳ ನೋಂದಣಿಯನ್ನು ಚಾರ್‌ಧಾಮ್ ಯಾತ್ರೆಯ ಹೆಬ್ಬಾಗಿಲು ರಿಷಿಕೇಶದಲ್ಲಿ ಮಾಡಲಾಗುತ್ತಿದೆ. ಆದರೆ, ಸುಡು ಬಿಸಿಲಿನಲ್ಲಿ ಗಂಟೆಗಟ್ಟಲೇ ನಿಂತರೂ ಪ್ರಯಾಣಿಕರ ನೋಂದಣಿ ಮಾತ್ರ ಆಗುತ್ತಿರಲಿಲ್ಲ. ಇದರಿಂದ ಬೇಸತ್ತ ಪ್ರಯಾಣಿಕರು ಉತ್ತರಾಖಂಡ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಬಳಿಕ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಯಾತ್ರಾರ್ಥಿಗಳನ್ನು ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಯಾತ್ರಿಕರು ನೋಂದಣಿ ಮಾಡುವ ಮೂಲಕ ಚಾರ್ಧಾಮ್ ಯಾತ್ರೆಗೆ ಕಳುಹಿಸುವ ಬೇಡಿಕೆಗೆ ಪಟ್ಟು ಹಿಡಿದರು.