ಸಿಕ್ಕೀಂ: ಭಾರಿ ಮಳೆಯಿಂದಾಗಿ ಭೂ ಕುಸಿತ ಮತ್ತು ರಸ್ತೆ ತಡೆ ಉಂಟಾಗಿ ಉತ್ತರ ಸಿಕ್ಕೀಂನ ಚುಂಗ್‌ಥಾಂಗ್‌ನಲ್ಲಿ ಸಿಲುಕಿದ್ದ 3500ಕ್ಕೂ ಅಧಿಕ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಶುಕ್ರವಾರ ಇಲ್ಲಿನ ಲಾಚೆನ್, ಲಾಚುಂಗ್ ಮತ್ತು ಚುಂಗ್‌ಥಾಂಗ್ ಕಣಿವೆಯಲ್ಲಿ ಧಾರಾಕಾರ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಧಾರಾಕಾರ ಮಳೆಯಿಂದಾಗಿ ಸಿಕ್ಕೀಂನ ಚುಂಗ್‌ಥಾಂಗ್ ಬಳಿಯಿರುವ ಸೇತುವೆಯೊಂದು ಕೊಚ್ಚಿ ಹೋದ ಪರಿಣಾಮ ರಸ್ತೆ ತಡೆ ಉಂಟಾಗಿದೆ. ಇದರಿಂದಾಗಿ ಸುಮಾರು 3,500 ಪ್ರವಾಸಿಗರು ಇಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಮತ್ತು ಸ್ಟ್ರೈಕಿಂಗ್ ಲಯನ್ ಡಿವಿಷನ್ ತ್ರಿಶಕ್ತಿ ಕಾರ್ಪ್ಸ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಸಿಬ್ಬಂದಿಗಳು ಪ್ರವಾಸಿಗರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಭಾರತೀಯ ಸೇನೆ ಮತ್ತು ಇತರ ರಕ್ಷಣಾ ತಂಡಗಳು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಪ್ರವಾಸಿಗರನ್ನು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಇದೇ ವೇಳೆ ಸುರಕ್ಷಿತ ಸ್ಥಳದಲ್ಲಿದ್ದ ಪ್ರವಾಸಿಗರಿಗೆ ಊಟದ ವ್ಯವಸ್ಥೆ, ತಾತ್ಕಾಲಿಕ ತಂಗುವ ಸೌಲಭ್ಯಗಳು ಮತ್ತು ವೈದ್ಯಕೀಯ ನೆರವು ನೀಡಲಾಗಿದೆ. ಸದ್ಯ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿರುವಲ್ಲಿ ರಸ್ತೆ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿದೆ.
ಪತ್ರಿಕಾ ಪ್ರಕಟಣೆಯಲ್ಲಿ "ಜೂನ್ 17 ರಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರು 2,000 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ರಸ್ತೆಗಳ ಪುನರ್ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಅಲ್ಲದೆ ಪ್ರವಾಸಿಗರನ್ನು ಸ್ಥಳಾಂತರಿಸುವ ಕಾರ್ಯ ಇನ್ನೂ ಮುಂದುವರೆದಿದೆ. ಇದರ ಜೊತೆಗೆ ತ್ರಿಶಕ್ತಿ ಕಾರ್ಪ್ಸ್, ಭಾರತೀಯ ಸೇನೆ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಸಿಬ್ಬಂದಿಗಳು ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಲ್ಲಿ ರಾತ್ರಿಯಿಡೀ ಪ್ರವಾಸಿಗರನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಹಠಾತ್ ಪ್ರವಾಹ ಉಂಟಾದ ಸ್ಥಳಗಳಲ್ಲಿ ಪುನರ್ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ಪ್ರವಾಸಿಗರಿಗೆ ಪರಿಹಾರ ನೀಡಲು ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ವೈದ್ಯಕೀಯ ನೆರವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರವಾಸಿಗರ ಮುಂದಿನ ಪ್ರಯಾಣಕ್ಕೆ ಮಾರ್ಗ ತೆರವುಗೊಳ್ಳುವವರೆಗಿನ ಅಗತ್ಯ ನೆರವುಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮಾರ್ಚ್ ತಿಂಗಳಲ್ಲಿ 1000 ಪ್ರವಾಸಿಗರ ರಕ್ಷಣೆ : ಕಳೆದ ಮಾರ್ಚ್ ತಿಂಗಳಲ್ಲಿ ಭಾರೀ ಹಿಮಪಾತ ಉಂಟಾಗಿ ಇಲ್ಲಿನ ಪೂರ್ವ ಸಿಕ್ಕೀಂನಲ್ಲಿ ಸಿಲುಕಿದ್ದ ಸುಮಾರು ಒಂದು ಸಾವಿರ ಪ್ರವಾಸಿಗರನ್ನು ಭಾರತೀಯ ಸೇನೆ ಸುರಕ್ಷಿತವಾಗಿ ರಕ್ಷಣೆ ಮಾಡಿತ್ತು. ಪೂರ್ವ ಸಿಕ್ಕೀಂನ ಚಂಗು, ನಾಥುಲಾ ಹಾಗೂ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ಭಾರಿ ಹಿಮಪಾತ ಉಂಟಾಗಿತ್ತು. ಇದಕ್ಕೂ ಮುನ್ನ ಪೂರ್ವ ಸಿಕ್ಕೀಂನ ಚಂಗು ಸರೋವರ ಸಮೀಪ ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 400 ಜನ ಪ್ರವಾಸಿಗರನ್ನು ಪೊಲೀಸರು ಮತ್ತು ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದರು.
ಇದನ್ನೂ ಓದಿ : ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್ ಜಾಮ್, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ