ಸಂಗ್ರೂರು (ಪಂಜಾಬ್): ಪಂಜಾಬ್ನ ಹಿಂದೂ ಕುಟುಂಬವೊಂದು ಮಸೀದಿ ನಿರ್ಮಿಸಲು ತಮ್ಮ ಜಾಗವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವ ಮೂಲಕ ಕೋಮು ಸಾಮರಸ್ಯವನ್ನು ಸಾರಿದೆ. ದಾನವಾಗಿ ಈ ಜಮೀನು ನೀಡಿದ್ದು ಇಡೀ ಗ್ರಾಮಸ್ಥರಲ್ಲಿ ಸಂತಸವನ್ನೂ ಉಂಟು ಮಾಡಿದೆ.
ಸಂಗ್ರೂರ್ ಜಿಲ್ಲೆಯ ದಿರ್ಬಾ ಪಟ್ಟಣದ ಸಮೀಪ ರಾಂಪುರ್ ಗುಜರ್ಸ್ ಎಂಬ ಸಣ್ಣ ಹಳ್ಳಿ ಇದೆ. ಈ ಗ್ರಾಮದಲ್ಲಿ ಸುಮಾರು 11 ಮುಸ್ಲಿಂ ಕುಟುಂಬಗಳು ವಾಸವಾಗಿವೆ. ಆದರೆ, ಮುಸ್ಲಿಂ ಸಮುದಾಯದವರು ನಮಾಜ್ ಮಾಡಲು ತಮ್ಮ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ದಿರ್ಬಾ ಮಸೀದಿಗೆ ಹೋಗಬೇಕಾಗಿತ್ತು. ಇದರಿಂದ ತುಂಬಾ ಕಷ್ಟವನ್ನು ಮುಸ್ಲಿಮರು ಅನುಭವಿಸುತ್ತಿದ್ದರು.
ಹೀಗಾಗಿಯೇ ಮುಸ್ಲಿಂ ಸಮುದಾಯದವರು ಗ್ರಾಮದಲ್ಲಿ ತಮಗೆ ಜಮೀನು ನೀಡಬೇಕೆಂದು ಪಂಚಾಯಿತಿಗೆ ಒತ್ತಾಯಿಸುತ್ತಿದ್ದರು. ಆದರೆ, ಪಂಚಾಯಿತಿಯಿಂದ ಜಾಗ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ಗ್ರಾಮದ ಬಳಿಯೇ ಮಸೀದಿ ಇರಬೇಕು ಎಂಬುದು ಮುಸ್ಲಿಂ ಸಮುದಾಯದ ಆಸೆಯಾಗಿತ್ತು. ಇದನ್ನು ಅರಿತ ಗ್ರಾಮದ ಹಿಂದೂ ಕುಟುಂಬವೊಂದು ಮಸೀದಿ ನಿರ್ಮಿಸಲು ದಾನವಾಗಿ ಜಮೀನು ನೀಡಿದೆ.
ಈಗ ಮಸೀದಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಲ್ಲದೇ, ಮಸೀದಿ ಕಟ್ಟಲು ಗ್ರಾಮಸ್ಥರು ಇಟ್ಟಿಗೆ ಕೂಡ ನೀಡುತ್ತಿದ್ದಾರೆ. ಅದರಲ್ಲೂ ಗ್ರಾಮದ ಮಧ್ಯದಲ್ಲಿ ಮಸೀದಿ ನಿರ್ಮಾಣವಾಗುತ್ತಿರುವುದರಿಂದ ಮುಸ್ಲಿಂ ಸಮುದಾಯದ ಜನರಲ್ಲಿ ಸಂತೋಷವನ್ನು ಉಂಟು ಮಾಡಿದೆ.
ಹಣ ಪಡೆಯದೇ ಮಸೀದಿಗೆ ಭೂ ದಾನ: ನಮ್ಮ ಹಳ್ಳಿಗಳಲ್ಲಿ 11 ಮುಸ್ಲಿಂ ಕುಟುಂಬಗಳು ವಾಸಿಸುತ್ತಿದ್ದು, ಅವರು ಪ್ರಾರ್ಥನೆ ಸಲ್ಲಿಸಲು ಗ್ರಾಮದಿಂದ ನಗರಕ್ಕೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು. ಈ ಹಿಂದೆ ನಮ್ಮ ಗ್ರಾಮ ಪಂಚಾಯಿತಿಯಿಂದ ನಿವೇಶನ ಕೇಳಿದ್ದರೂ ಕಾರಣಾಂತರಗಳಿಂದ ನಿವೇಶನ ಸಿಕ್ಕಿರಲಿಲ್ಲ ಎಂದು ಗ್ರಾಮಸ್ಥ ಹರ್ಮೀತ್ ಸಿಂಗ್ ತಿಳಿಸಿದ್ದಾರೆ.
ಹೀಗಾಗಿ ಮುಸ್ಲಿಂ ಸಮುದಾಯದವರು ನಮ್ಮೊಂದಿಗೆ ಮಾತನಾಡಿದರು. ನಾನು ನನ್ನ ಕುಟುಂಬದೊಂದಿಗೆ ಮಾತನಾಡಿ ಮಸೀದಿ ನಿರ್ಮಿಸಲು ನಾವು ಭೂಮಿಯನ್ನು ನೀಡುತ್ತೇವೆ. ನೀವು ಮಸೀದಿ ನಿರ್ಮಿಸಲು ಬಯಸಿದರೆ, ನಾವು ನಿಮಗೆ ಹಣವಿಲ್ಲದೇ ಭೂಮಿ ನೀಡುತ್ತೇವೆ ಅಂತಾ ತಿಳಿಸಲಾಗಿತ್ತು ಎಂದೂ ಹರ್ಮೀತ್ ಸಿಂಗ್ ಹೇಳಿದ್ದಾರೆ.
ಗ್ರಾಮದಲ್ಲಿ ನಮ್ಮ ಹಿರಿಯರ ಎರಡು ಮನೆಗಳು ಇದ್ದವು. ಈಗ ಹತ್ತಾರು ಮನೆಗಳಿವೆ. ಎಲ್ಲ ಜನರು ಒಟ್ಟಿಗೆ ವಾಸುತ್ತಿದ್ದೇವೆ. ನಾವು ಪ್ರಾರ್ಥನೆಯನ್ನು ಸಲ್ಲಿಸಲು 3 ಕಿಮೀ ದೂರ ಹೋಗುವ ನಮ್ಮ ಕಷ್ಟವನ್ನು ನೋಡಿ ಮಸೀದಿ ನಿರ್ಮಿಸಲು ಭೂಮಿ ದಾನ ಮಾಡಿದ್ದಾರೆ. ಇದರಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ ಎಂದು 75 ವರ್ಷದ ಹಫೀಜ್ ಹನೀಫ್ ಖಾನ್ ಸಂತಸ ವ್ಯಕ್ತಪಡಿಸಿದ್ಧಾರೆ.
ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದ ಹಿಂದೂ ಕುಟುಂಬದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗಲೇ ಗ್ರಾಮ ಪಂಚಾಯಿತಿಯೂ ಧರ್ಮಶಾಲೆ ನಿರ್ಮಿಸಲು ಮುಸ್ಲಿಂ ಸಮುದಾಯಕ್ಕೆ 10 ಎಕರೆ ಭೂಮಿ ನೀಡಲು ಒಪ್ಪಿಗೆ ನೀಡಿದೆ. ಇದರಿಂದ ಮುಸ್ಲಿಂ ಸಮುದಾಯದವರು ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗಲಿದೆ ಎಂದು ಸರಪಂಚ್ ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸಿದ ಮದುರೈ ವ್ಯಕ್ತಿ: ನಿತ್ಯವೂ ಪೂಜೆ ಪುನಸ್ಕಾರ