ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ರಾಜಧಾನಿಯ ಪಾರಸ್ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಲಾಲು ಪ್ರಸಾದ್ ಭಾನುವಾರ ಸಂಜೆ ಟೆನ್ ಸರ್ಕ್ಯುಲರ್ ರಸ್ತೆಯಲ್ಲಿರುವ ಮಾಜಿ ಸಿಎಂ ರಾಬ್ರಿ ದೇವಿ ಅವರ ನಿವಾಸದ ಮೆಟ್ಟಿಲುಗಳಿಂದ ಜಾರಿಬಿದ್ದರು. ಇದರಿಂದಾಗಿ ಅವರ ಬಲ ಭುಜ ಮತ್ತು ಸೊಂಟಕ್ಕೆ ಗಾಯಗಳಾಗಿವೆ. ಅವರ ಭುಜದ ಮೂಳೆಯಲ್ಲಿ ಸಣ್ಣ ಮೂಳೆ ಮುರಿತವಾಗಿದೆ ಎಂದು ಹೇಳಲಾಗುತ್ತಿದೆ. ಈಗ ಅವರನ್ನು ಪಾರಸ್ ಆಸ್ಪತ್ರೆಯಿಂದ ನಿಂದ ಬಿಡುಗಡೆ ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.
ಈಗ ಆರೋಗ್ಯ ಚೆನ್ನಾಗಿದೆ, ರಾತ್ರಿ ಮೂರೂವರೆ ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಆರೋಗ್ಯ ಸುಧಾರಿಸಿದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮಾಹಿತಿ ನೀಡಿದ್ದಾರೆ.
ಲಾಲು ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು: ಪಾರಸ್ ಎಚ್‌ಎಂಆರ್‌ಐ ಆಸ್ಪತ್ರೆಯ ವಕ್ತಾರರ ಪ್ರಕಾರ, ಲಾಲು ಪ್ರಸಾದ್ ಅವರನ್ನು ರಾತ್ರಿ 3:30 ರ ಸುಮಾರಿಗೆ ಆಸ್ಪತ್ರೆಯ ತುರ್ತುಘಟಕಕ್ಕೆ ಕರೆತರಲಾಗಿತ್ತು. ಭುಜದ ಗಾಯದಿಂದಾಗಿ ಲಾಲು ಪ್ರಸಾದ್ ಅವರ ಸ್ಥಿತಿ ಸ್ವಲ್ಪ ಹದಗೆಟ್ಟಿತ್ತು. ಬಳಿಕ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿ, ಅಲ್ಲಿ ಅವರ ಹಿಂದಿನ ಎಲ್ಲ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡಲಾಯಿತು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಿದ್ದಾರೆ.
ಗಂಭೀರ ಅಪಾಯದಿಂದ ಪಾರು: ಲಾಲು ಯಾದವ್ ಅವರು ಬಿದ್ದ ನಂತರ ಚಿಕಿತ್ಸೆಗಾಗಿ ಮೊದಲು ಕಂಕರ್‌ಬಾಗ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಇಡೀ ದೇಹದ ಎಕ್ಸ್-ರೇ ಮತ್ತು ಎಂಆರ್ಐ ಮಾಡಿದ್ದರು. ವರದಿಯ ಆಧಾರದ ಮೇಲೆ ಅವರ ಭುಜದ ಮೇಲೆ ಸಣ್ಣ ಮೂಳೆ ಮುರಿತವಾಗಿದೆ ಎಂದು ತಿಳಿದು ಬಂದಿತ್ತು. ವೈದ್ಯರು ಕಚ್ಚಾ ಪ್ಲಾಸ್ಟರ್ ಹಚ್ಚಿ ಅಲ್ಲಿಂದ ಡಿಸ್ಚಾರ್ಜ್ ಮಾಡಿದ್ದರು. ಬಳಿಕ ಮನೆಗೆ ಬಂದಿದ್ದ ಅವರ ಸ್ಥಿತಿ ಚೆನ್ನಾಗಿತ್ತು. ಆದರೆ, ನಿನ್ನೆ ತಡರಾತ್ರಿ ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಪಾರಸ್‌ಗೆ ದಾಖಲಿಸಲಾಗಿತ್ತು.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ಲಾಲು ಯಾದವ್ : ಈಗಾಗಲೇ ಕಿಡ್ನಿ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಲಾಲು ಯಾದವ್ ಅವರು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ದೆಹಲಿಯಿಂದ ಪಾಟ್ನಾ ತಲುಪಿದ್ದರು. ಲಾಲು ಯಾದವ್ ಕೂಡ ಕಿಡ್ನಿ ಕಸಿಗಾಗಿ ಸಿಂಗಾಪುರಕ್ಕೆ ಹೋಗುತ್ತಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಳೆದ ಒಂದು ವರ್ಷದಿಂದ ಸಿಂಗಾಪುರ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಿಂಗಾಪುರದಲ್ಲಿ ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು ಎಂಬ ಮಾತು ಕೇಳಿಬಂದಿತ್ತು.
ಇದನ್ನೂ ಓದಿ: ಕರ್ನಾಟಕದೊಂದಿಗೆ ದಕ್ಷಿಣದ ಎಲ್ಲ ಕಡೆ ಕಮಲ ಅರಳಿಸಲು ಮಿಷನ್ ದಕ್ಷಿಣ ಯೋಜನೆ: ಸಿ.ಟಿ ರವಿ