ಪಾಟ್ನಾ (ಬಿಹಾರ): ಯಾರು ಬೇಕಾದರೂ ವಿರೋಧ ಪಕ್ಷಗಳ ಒಕ್ಕೂಟ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಇಂಡಿಯಾ) ಸಂಚಾಲಕರಾಗಬಹುದು ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದರು. ಇಂಡಿಯಾ ಮೈತ್ರಿಕೂಟದ ಸಂಚಾಲಕ ಯಾರು? ಎಂಬ ವಿಚಾರದಲ್ಲಿ ಯಾವುದೇ ತಕರಾರು ಇಲ್ಲ ಎಂದು ಹೇಳಿರುವ ಅವರು, ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ನಾವು ಸಂಚಾಲಕರನ್ನು ಅಂತಿಮಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇಂದು ಗೋಪಾಲ್‌ಗಂಜ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಾಲು ಪ್ರಸಾದ್, ಪ್ರತಿ ಮೂರರಿಂದ ನಾಲ್ಕು ರಾಜ್ಯಗಳಿಗೆ ಒಬ್ಬ ಸಂಚಾಲಕ ಅಥವಾ ಒಂದು ರಾಜ್ಯಕ್ಕೆ ಒಬ್ಬ ಸಂಚಾಲಕನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದರು. ಎರಡು ಅಥವಾ ಹೆಚ್ಚಿನ ಪಕ್ಷಗಳ ನಡುವೆ ಸಮನ್ವಯಗೊಳಿಸಲು ಒಬ್ಬ ಸಂಚಾಲಕನನ್ನು ನೇಮಿಸಲಾಗುವುದು. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ. ಎಲ್ಲರೂ ಒಟ್ಟಿಗೆ ಮುಂಬೈನಲ್ಲಿ ಕುಳಿತು ಇಂಡಿಯಾದ ಸಂಚಾಲಕರನ್ನು ಸರ್ವಾನುಮತದಿಂದ ನೇಮಿಸುತ್ತೇವೆ ಎಂದು ಅವರು ಹೇಳಿದರು. ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ, ಜೆಡಿ (ಯು) ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯನ್ನು ಎದುರಿಸಲು ಹಲವು ಪಕ್ಷಗಳನ್ನು ಒಂದೇ ವೇದಿಕೆಗೆ ತಂದಿದ್ದರಿಂದ ಇಂಡಿಯಾದ ಸಂಚಾಲಕರಾಗಿ ನೇಮಕಗೊಳ್ಳುತ್ತಾರೆ ಎಂಬ ವದಂತಿ ಇತ್ತು ಎಂದು ಐಎಎನ್‌ಎಸ್ ವರದಿ ಮಾಡಿತ್ತು.
ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಯಾರೆಂಬುದು ಚುನಾಯಿತ ಸಂಸದರು ನಿರ್ಧರಿಸುತ್ತಾರೆ: ಪಿಎಲ್ ಪುನಿಯಾ
ಮುಂಬೈನಲ್ಲಿ 3ನೇ ಸಭೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಇದೀಗ ಈ ಮೈತ್ರಿ ಪಕ್ಷಗಳು ಮೂರನೇ ಬಾರಿಗೆ ಸಭೆ ನಡೆಸಲು ಮುಂದಾಗಿದ್ದು, ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಮೈತ್ರಿ ಕೂಟದ ಮೊದಲ ಸಭೆಯು ಜೂನ್‌ನಲ್ಲಿ ಪಾಟ್ನಾದಲ್ಲಿ ಮತ್ತು ಎರಡನೇ ಸಭೆ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದಿತ್ತು. ಈ ಬಾರಿ 2024ರ ಸಾರ್ವತ್ರಿಕ ಚುನಾವಣಾ ಪೂರ್ವ ಮಾತುಕತೆ, ಪ್ರಚಾರದಂತಹ ನಿರ್ದಿಷ್ಟ ಕ್ರಿಯೆಗಳಿಗೆ ಸಮಿತಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಜತೆಗೆ, ಪಕ್ಷಗಳ ನಡುವೆ ಉತ್ತಮ ಸಮನ್ವಯ ಮತ್ತು ಸಹಕಾರಕ್ಕಾಗಿ ಶೀಘ್ರದಲ್ಲೇ ಜಂಟಿ ಕಾರ್ಯದರ್ಶಿಯನ್ನು ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿ ಬೆಂಗಳೂರಿನಲ್ಲಿ 26 ಪಕ್ಷಗಳ ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಸಭೆಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಬಣಕ್ಕೆ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಎಂಬ ಹೆಸರನ್ನು ಘೋಷಿಸಿದ್ದರು. ಈ ವೇಳೆ ಪಕ್ಷಗಳ ನಡುವಿನ ಸಮನ್ವಯಕ್ಕಾಗಿ 11 ಸದಸ್ಯರ ಸಮಿತಿಯನ್ನು ರಚಿಸಲಾಗುವುದು ಮತ್ತು ಮುಂಬೈನಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ: ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ: ಆ. 31 ಮತ್ತು ಸೆ.1ಕ್ಕೆ ಮೀಟಿಂಗ್ ನಡೆಯುವ ಸಾಧ್ಯತೆ