ಪಾಟ್ನಾ: ಮೂರೂವರೆ ವರ್ಷಗಳ ನಂತರ ಬಿಹಾರಕ್ಕೆ ಮರಳಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪಾಟ್ನಾದಲ್ಲಿ ಮಾಧ್ಯಮವೊಂದಕ್ಕೆ ಮೊದಲ ಸಂದರ್ಶನ ನೀಡಿದರು. ಈ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರದಲ್ಲಿ ಮಹಾಮೈತ್ರಿಕೂಟಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಅವರು ಉತ್ತರಿಸಿದರು.
'ಅನಾರೋಗ್ಯ ಮತ್ತು ಬಂಧನದ ಕಾರಣದಿಂದಾಗಿ ಎರಡು ಚುನಾವಣೆಗಳನ್ನು ತಪ್ಪಿಸಿಕೊಂಡಿದ್ದೇನೆ. ಈಗ ಉಪಚುನಾವಣೆ ನಡೆಯುತ್ತಿದೆ. ಜನರ ಪ್ರೀತಿಯಿಂದ ಮತ್ತೆ ನನಗೆ ಪಾಲ್ಗೊಳ್ಳಲು ಸಾಧ್ಯವಾಗಿದೆ. ಕುಶೇಶ್ವರಸ್ಥಾನ ಮತ್ತು ತಾರಾಪುರ ಉಪಚುನಾವಣೆ ಕ್ಷೇತ್ರಗಳ ಕುರಿತು ಅಕ್ಟೋಬರ್ 27 ಅಂದರೆ ಬುಧವಾರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ' ಎಂದು ತಿಳಿಸಿದರು.
ಹಣದುಬ್ಬರದ ವಿಷಯದ ಬಗ್ಗೆ ಮಾತನಾಡುತ್ತಾ, ಇಂದು ಹಣದುಬ್ಬರವು ದೇಶದ ಬೆನ್ನು ಮುರಿಯುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನು ಅವರು ಪ್ರಶ್ನಿಸಿದರು.
ಬಿಹಾರದಲ್ಲಿ ಮಹಾಮೈತ್ರಿಕೂಟದಲ್ಲಿನ ಗೊಂದಲ ಮತ್ತು ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಿನ ಹದಗೆಡುತ್ತಿರುವ ಸಂಬಂಧದ ಬಗ್ಗೆ ಲಾಲು ಮೃದುಧೋರಣೆ ತಾಳಿದರು. ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಸಮಾನಮನಸ್ಕರು, ಜಾತ್ಯತೀತ ಶಕ್ತಿಗಳು ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.