ಲಖೀಂಪುರ್ ಖೇರಿ/ಉತ್ತರಪ್ರದೇಶ: ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ವ್ಯಕ್ತಿಗಳನ್ನು ಬುಧವಾರ ಬಂಧಿಸಲಾಗಿದ್ದು, ನ್ಯಾಯಾಲಯವು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಜಾಮೀನು ನಿರಾಕರಿಸಿದೆ.
ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾದ ಅಂಕಿತ್ ದಾಸ್ ಮತ್ತು ಲತೀಫ್ ಅಲಿಯಾಸ್ ಕಾಳೆ ಅವರನ್ನು ವಿಚಾರಣೆ ನಂತರ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿಚಾರಣೆಗಾಗಿ ಈ ಇಬ್ಬರನ್ನು ಪೊಲೀಸರು ತಮ್ಮ ಕಸ್ಟಡಿಗೆ ಕೋರಿದಾಗ, ಅವರ ವಕೀಲರು ಅದನ್ನು ವಿರೋಧಿಸಿದರು. ಇಬ್ಬರ ಪೊಲೀಸ್ ರಿಮಾಂಡ್ ಅರ್ಜಿ ಕುರಿತಾದ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿದೆ ಎಂದು ಹೇಳಲಾಗಿದೆ. ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ (ಎಸ್‌ಪಿಒ) ಎಸ್‌ಪಿ ಯಾದವ್ ಪಿಟಿಐಗೆ ಈ ಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳಾದ ಆಶಿಶ್ ಮಿಶ್ರಾ ಮತ್ತು ಅವರ ಸಹಚರ ಆಶಿಶ್ ಪಾಂಡೆ ಬುಧವಾರ ಜಾಮೀನು ಅರ್ಜಿಗಳನ್ನು ಸಲ್ಲಿಸಿದರು. ಆದರೆ ಅವುಗಳನ್ನು ಮುಖ್ಯ ನ್ಯಾಯಾಂಗ ನ್ಯಾಯಾಧೀಶ ಚಿಂತಾ ರಾಮ್ ತಿರಸ್ಕರಿಸಿದರು ಎಂದು ಎಸ್‌ಪಿ ತಿಳಿಸಿದ್ದಾರೆ.
12 ಗಂಟೆಗಳ ವಿಚಾರಣೆ ನಂತರ ಬಂಧನ
12 ಗಂಟೆಗಳ ವಿಚಾರಣೆಯ ನಂತರ ವಿಶೇಷ ತನಿಖಾ ತಂಡದಿಂದ ಅಕ್ಟೋಬರ್ 9 ರಂದು ಬಂಧಿಸಲ್ಪಟ್ಟ ಆಶಿಶ್ ಮಿಶ್ರಾ ಅವರನ್ನು ಮಂಗಳವಾರದಿಂದ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಮಂಗಳವಾರ ಬಂಧಿತ ಶೇಖರ್ ಭಾರತಿಯನ್ನು ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಶಿಶ್ ಮಿಶ್ರಾ, ಲುವಕುಶ್, ಆಶಿಶ್ ಪಾಂಡೆ, ಭಾರತಿ, ಅಂಕಿತ್ ಮತ್ತು ಕಾಳೆ ಎಂಬ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆಶಿಶ್ ಮಿಶ್ರಾ ಅವರ ಆಪ್ತ ಸ್ನೇಹಿತರೆಂದು ಹೇಳಲಾಗುವ ಅಂಕಿತ್ ದಾಸ್ ಮತ್ತು ಕಾಳೆ, ಲಖಿಂಪುರ್‌ನ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಎಸ್‌ಐಟಿ ಮುಂದೆ ಹಾಜರಾದರು. ಅಕ್ಟೋಬರ್ 3 ರಂದು ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಮೃತಪಟ್ಟವರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಸಚಿವರ ಚಾಲಕ ಮತ್ತು ಪತ್ರಕರ್ತರು ಸೇರಿದ್ದಾರೆ.
ಆರೋಪಿ ದಾಸ್ ಮಾಜಿ ಸಚಿವರ ಸೋದರ ಅಳಿಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಸ್ ಮತ್ತು ಕಾಳೆ ಅವರನ್ನು ವಿಚಾರಣೆಗೆ ತನಿಖಾಧಿಕಾರಿಗಳು ಕರೆಸಿಕೊಂಡಿದ್ದರು. ದಾಸ್ ಮಾಜಿ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ. ಮಂಗಳವಾರ, ದಾಸ್ ಮತ್ತು ಕಾಳೆ ಮುಖ್ಯ ನ್ಯಾಯಾಧೀಶರ ಮುಂದೆ ಶರಣಾಗತಿಗಾಗಿ ಅರ್ಜಿ ಸಲ್ಲಿಸಿದ್ದರು.
ದಾಸ್ ಎಂಬಾತ ಮಾಜಿ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ. ಮಂಗಳವಾರ, ದಾಸ್ ಮತ್ತು ಕಾಳೆ ಮುಖ್ಯ ನ್ಯಾಯಾಧೀಶರ ಮುಂದೆ ಶರಣಾಗತಿಗಾಗಿ ಅರ್ಜಿ ಸಲ್ಲಿಸಿದ್ದರು. ಹಿಂಸಾಚಾರದಲ್ಲಿ ಮೃತಪಟ್ಟವರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಸಚಿವರ ಚಾಲಕ ಮತ್ತು ಪತ್ರಕರ್ತರೂ ಸೇರಿದ್ದಾರೆ.