ನವದೆಹಲಿ: ಅಜಯ್ ಮಿಶ್ರಾ ಅವರು ಕೇಂದ್ರ ಸಚಿವ ಸ್ಥಾನದಲ್ಲಿರುವವರೆಗೂ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನ್ಯಾಯಯುತ ತನಿಖೆ ಸಾಧ್ಯವಿಲ್ಲ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಅಜಯ್ ಮಿಶ್ರಾ ಅವರು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿದ್ದು, ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಇವರ ಪುತ್ರ ಆಶಿಶ್ ಮಿಶ್ರಾರನ್ನು ಸತತ 12 ಗಂಟೆಗಳ ವಿಚಾರಣೆಯ ನಂತರ ಉತ್ತರ ಪ್ರದೇಶದ ಎಸ್ಐಟಿ ತಂಡ ಶನಿವಾರ ರಾತ್ರಿ ಬಂಧಿಸಿದೆ.
ಇದನ್ನೂ ಓದಿ: ಲಖೀಮ್ಪುರ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಅರೆಸ್ಟ್
ಪ್ರಕರಣದಲ್ಲಿ ಆಶಿಶ್ ಮಿಶ್ರಾ ಹೆಸರನ್ನು ಎಫ್‌ಐಆರ್‌ನಲ್ಲಿ ಈ ಮೊದಲೇ ಉಲ್ಲೇಖಿಸಲಾಗಿತ್ತು. ಆದರೂ ಕೂಡ ಇಷ್ಟು ದಿನಗಳ ಬಳಿಕ ಬಂಧಿಸಲಾಗಿದೆ. ಅಜಯ್ ಮಿಶ್ರಾ ಸಚಿವ ಸ್ಥಾನದಲ್ಲಿ ಇರುವವರೆಗೂ ನ್ಯಾಯಯುತ ತನಿಖೆ ನಡೆಯುವುದಿಲ್ಲ. ಒಬ್ಬ ನ್ಯಾಯಾಧೀಶರಿಂದಲೇ ಈ ಕೇಸ್ನ ತನಿಖೆ ನಡೆಯಬೇಕು. ಏಕೆಂದರೆ ರೈತರನ್ನು ಈ ರೀತಿ ಸಾಯಿಸಿದ್ದನ್ನು ನಾವು ಎಲ್ಲೂ ನೋಡಿಲ್ಲ ಎಂದು ಭೂಪಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 8 ಜನ ಮೃತಪಟ್ಟಿದ್ದರು. ಈ ವೇಳೆ ಪ್ರತಿಭಟನಾ ನಿರತ ರೈತರ ಮೇಲೆ ಆಶಿಶ್ ಮಿಶ್ರಾ ಕಾರು ಹರಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದು ದೇಶಾದ್ಯಂತ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿತ್ತು.