ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ದುರಂತದಲ್ಲಿ ಮಡಿದ ರೈತರ ಕುಟುಂಬಗಳಿಗೆ ಪರಿಹಾರಧನ ಹಾಗು ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಯುಪಿ ಸರ್ಕಾರ ಈಗಾಗಲೇ ಘೋಷಿಸಿದೆ. ಈ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈ ಘಟನೆ ದೇಶವ್ಯಾಪಿ ಹರಡಿ ದೊಡ್ಡಮಟ್ಟದ ವಿವಾದ ಆಗುವುದನ್ನು ತಡೆಯುವ ಮಹತ್ವದ ಕೆಲಸಕ್ಕೆ ಕೈ ಹಾಕಿದೆ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಾ ಹೈಕಮಾಂಡ್?
ಮುಂದಿನ ವರ್ಷ ಯುಪಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಲಖಿಂಪುರ ಘಟನೆಯ ಕುರಿತಾಗಿ ರಾಜ್ಯದಲ್ಲಿ ಪಕ್ಷದ ಹಿರಿಯ ನಾಯಕರ ನಡುವೆಯೇ ಸಾಕಷ್ಟು ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಹೀಗಾಗಿ, ಪಕ್ಷದ ಕೇಂದ್ರೀಯ ನಾಯಕರು ಈ ಬಾರಿ ಖಡಕ್ ಕ್ರಮಕ್ಕೆ ಮುಂದಾದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸುತ್ತಿವೆ.
ಕಠಿಣ ಕ್ರಮಕ್ಕೆ ವರುಣ್ ಗಾಂಧಿ ಒತ್ತಾಯ
ಪಕ್ಷದಲ್ಲಿ ಪ್ರಭಾವಿ ನಾಯಕ, ಅಷ್ಟೇ ಅಲ್ಲ, ಬಂಡಾಯ ಧ್ವನಿಯೂ ಆಗಿರುವ ವರುಣ್ ಗಾಂಧಿ ಈಗಾಗಲೇ ಲಖೀಂಪುರ ಘಟನೆಯನ್ನು ಬಹಿರಂಗವಾಗಿಯೇ ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರೈತರ ವಿರುದ್ಧ ಮಾತನಾಡಿದ್ರೆ ಕಠಿಣ ಕ್ರಮ
ಇದೇ ವೇಳೆ, ಲಖಿಂಪುರ ಖೇರಿ ಘಟನೆಯ ಬಗ್ಗೆ ಯಾವುದೇ ರೀತಿಯ ವಿವಾದಿತ ಹೇಳಿಕೆಗಳನ್ನು ನೀಡದಂತೆ ಪಕ್ಷದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಇದ್ರ ಹೊರತಾಗಿ ಉತ್ತರ ಪ್ರದೇಶದ ಪಕ್ಷದ ಕೆಲವು ನಾಯಕರಿಗೆ ಘಟನೆಯ ಬಗ್ಗೆ ಸಮತೋಲಿತ ಹೇಳಿಕೆಗಳನ್ನು ಕೊಡುವಂತೆಯೂ ಸೂಚಿಸಲಾಗಿದೆ. ಆದ್ರೆ, ಹೇಳಿಕೆ ಕೊಡುವ ಭರದಲ್ಲಿ ರೈತರ ವಿರುದ್ಧ ಮಾತನಾಡಿದರೆ ಕಟ್ಟುನಿಟ್ಟಿನ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಕೊಟ್ಟಿದೆ.
'ಖಲಿಸ್ತಾನ್ ಕೈವಾಡ'
ಈ ಬೆಳವಣಿಗೆಗಳ ನಡುವೆ ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರು ಮಾತನಾಡುತ್ತಾ, 'ಇಡೀ ಘಟನೆ ಖಲಿಸ್ತಾನ್ ಗುಂಪಿನ ನಾಯಕರ ಆಣತಿಯಂತೆ ನಡೆದಿದೆ. 2017ರಲ್ಲಿ ಯುಪಿ ಮತ್ತು ಪಂಜಾಬ್ ಪೊಲೀಸರು ಜಂಟಿ ತನಿಖೆ ನಡೆಸಿದಾಗ ಈ ಪ್ರದೇಶದಲ್ಲಿ ಬಾಬ್ಬರ್ ಖಾಲ್ಸಾ ಸಕ್ರಿಯವಾಗಿರುವುದು ಕಂಡುಬಂದಿದೆ' ಎಂದು ಹೇಳುತ್ತಾರೆ.
'ರೈತರ ಹೆಸರಲ್ಲಿ ರಾಜಕೀಯ ಲಾಭದ ಹುನ್ನಾರ'
ರಾಜ್ಯ ಬಿಜೆಪಿ ವಕ್ತಾರ ಗೋಪಾಲ ಕೃಷ್ಣ ಅಗರ್‌ವಾಲ್ ಪ್ರತಿಕ್ರಿಯಿಸಿ, 'ಈ ಘಟನೆ ನಡೆದಿದ್ದು ದುರದೃಷ್ಟಕರ. ಇದರ ಹಿಂದಿನ ಕುತಂತ್ರವನ್ನು ಶೀಘ್ರವೇ ಬಯಲಿಗೆಳೆಯಲಾಗುವುದು. ರೈತರ ಆಕ್ರೋಶದಿಂದ ರಾಜಕೀಯ ಪಕ್ಷಗಳು ಲಾಭ ಗಳಿಸುವ ಹುನ್ನಾರ ನಡೆಸುತ್ತಿವೆ. ಆದ್ರೆ ಯೋಗಿ ಸರ್ಕಾರ ಅಪರಾಧಿಗಳನ್ನು ಶಿಕ್ಷಿಸುವ ಭರವಸೆಯನ್ನು ಈಗಾಗಲೇ ನೀಡಿದೆ' ಎಂದು ಅವರು ತಿಳಿಸಿದರು.
ಈಟಿವಿ ಭಾರತದ ಜೊತೆ ಮಾತನಾಡಿದ ಅವರು, 'ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಸುಪ್ರೀಂಕೋರ್ಟ್ ಅಂಗಳದಲ್ಲಿರುವಾಗ ರೈತರು ಪ್ರತಿಭಟನೆ ಮಾಡುವ ಅಗತ್ಯವೇನು?. ಅಷ್ಟೇ ಅಲ್ಲ, ಈ ಮೂರು ಕಾಯ್ದೆಗಳನ್ನು ಸದ್ಯಕ್ಕೆ ಕೇಂದ್ರ ಸರ್ಕಾರ ಅಮಾನತ್ತಿನಲ್ಲಿಟ್ಟಿದೆ. ಇದ್ರ ಜೊತೆಜೊತೆಗೆ ರೈತರ ಜೊತೆ ಈ ವಿಚಾರವಾಗಿ ಮಾತನಾಡಲು, ಚರ್ಚಿಸಲು ಸರ್ಕಾರ ಬದ್ಧವಾಗಿದೆ. ದುರಂತ ಅಂದ್ರೆ, ವಿರೋಧಪಕ್ಷಗಳು ಇದ್ರ ಲಾಭ ಗಿಟ್ಟಿಸಿಕೊಳ್ತಿವೆ' ಎಂದರು.
ಲಖೀಂಪುರ ಖೇರಿಯಲ್ಲಿ ಭಾನುವಾರ ಸಂಜೆ ನಡೆದ ಹಿಂಸಾಚಾರದಲ್ಲಿ 8 ಮಂದಿ ಸಾವಿಗೀಡಾಗಿದ್ದರು. ಇದೇ ವೇಳೆ ಹಲವು ರೈತರು ಗಾಯಗೊಂಡಿದ್ದರು. ಲಖೀಂಪುರ ಖೇರಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಹಿಂಸಾಚಾರ ನಡೆದಿದೆ.
ಇದನ್ನೂ ಓದಿ: ಪ್ರಪಂಚದಾದ್ಯಂತ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಫೇಸ್ಬುಕ್ ಡೌನ್.. ಬಳಕೆದಾರರ ಪರದಾಟ