ಭಿಲ್ವಾರ(ರಾಜಸ್ಥಾನ): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ. ಹೀಗಾಗಿ ಜನರು ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಬರಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ವಿವಿಧ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದು, ಜನರು ಹೊರ ಬರದಂತೆ ಮನವಿ ಮಾಡ್ತಿದ್ದಾರೆ. ಇದರ ಮಧ್ಯೆ ಲೇಡಿ ಕಾನ್ಸ್ಟೆಬಲ್ ಒಬ್ಬರು ರಾಜಸ್ಥಾನದ ಭಿಲ್ವಾರ ಜಿಲ್ಲಾಧಿಕಾರಿಯನ್ನ ನಡು ರಸ್ತೆಯಲ್ಲಿ ನಿಲ್ಲಿಸಿ, ಪ್ರಶ್ನೆ ಮಾಡಿರುವ ಅಪರೂಪದ ಘಟನೆ ನಡೆದಿದೆ.
ಜಿಲ್ಲಾಧಿಕಾರಿಯಾಗಿರುವ ಶಿವಪ್ರಸಾದ್ ಎಂ. ನಾಕಟೆ ಬೈಸಿಕಲ್ ಮೇಲೆ ತೆರಳುತ್ತಿದ್ದರು. ಈ ವೇಳೆ ಮಹಿಳಾ ಕಾನ್ಸ್ಟೆಬಲ್ ಅವರನ್ನ ನಿಲ್ಲಿಸಿ, ನಗರದಲ್ಲಿ ಲಾಕ್ಡೌನ್ ಇದೆ ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಮನೆಯಿಂದ ಹೊರಬರಲು ಕಾರಣ ಏನು ಎಂಬುದನ್ನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಾಸ್ಕ್ ಹಾಕಿಕೊಂಡಿದ್ದ ಕಾರಣ ಜಿಲ್ಲಾಧಿಕಾರಿಯನ್ನ ಗುರುತಿಸುವಲ್ಲಿ ಅಲ್ಲಿನ ಪೊಲೀಸರು ವಿಫಲರಾಗಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ - ಬಿಜೆಪಿ ನಡುವೆ 'ಟೂಲ್ಕಿಟ್' ಸಮರ: ಮೋದಿ ಇಮೇಜ್ ಕೆಡಿಸಲು ಕೈ ಅಸ್ತ್ರ!?
ಹೀಗಾಗಿ ಪರಿಚಯ ಮಾಡಿಕೊಟ್ಟ ಬಳಿಕ ಅವರು ಹಾಕಿಕೊಂಡಿದ್ದ ಮಾಸ್ಕ್ ಅನ್ನು ತೆಗೆದಿದ್ದಾರೆ. ಅವರನ್ನ ನೋಡಿರುವ ಮಹಿಳಾ ಪೊಲೀಸ್ ಒಂದು ಕ್ಷಣ ಬೆರಗಾಗಿದ್ದಾರೆ. ಆದರೆ ಮಹಿಳಾ ಕಾನ್ಸ್ಟೇಬಲ್ ಕೆಲಸಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ, ಅಲ್ಲಿಂದ ತೆರೆಳಿದ್ದಾರೆ.