ನವದೆಹಲಿ: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಪಿಂಚಣಿ ನಿಧಿಗೆ ಕೊಡುಗೆ ನೀಡಲು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (ಪಿಎಂ-ಎಸ್‌ವೈಎಂ) ಯೋಜನೆಯಡಿಯಲ್ಲಿ 'ಡೊನೇಟ್-ಎ-ಪೆನ್ಷನ್' ಕಾರ್ಯಕ್ರಮ ಆರಂಭಿಸಿದ್ದು, ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಇಂದು ಚಾಲನೆ ನೀಡಿದ್ದಾರೆ.
ಇದು (PM-SYM) ಪಿಂಚಣಿ ಯೋಜನೆಯಡಿಯಲ್ಲಿನ ಉಪಕ್ರಮವಾಗಿದ್ದು, ನಾಗರಿಕರು ತಮ್ಮ ತಕ್ಷಣದ ಸಹಾಯಕ ಸಿಬ್ಬಂದಿಗಳಾದ ಗೃಹ ಕಾರ್ಮಿಕರು, ಚಾಲಕರು, ಸಹಾಯಕರು ಮುಂತಾದವರ ಪ್ರೀಮಿಯಂ ಕೊಡುಗೆಯನ್ನು ದಾನ ಮಾಡಬಹುದು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪಿಎಂ-ಎಸ್‌ವೈಎಂ ಯೋಜನೆ ಅಡಿಯಲ್ಲಿ 18-40 ವರ್ಷ ವಯಸ್ಸಿನ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಅವರ ವಯಸ್ಸಿನ ಆಧಾರದ ಮೇಲೆ ಪ್ರತಿ ವರ್ಷ ಕನಿಷ್ಠ 660 ರಿಂದ 2400 ರೂ.ಇವರ ಹೆರಿನಲ್ಲಿ ಠೇವಣಿ ಮಾಡಲಾಗುತ್ತದೆ. 60 ವರ್ಷ ವಯಸ್ಸ ತಲುಪಿದ ನಂತರ ಇವರ ತಿಂಗಳಿಗೆ 3,000 ರೂಪಾಯಿಗಳ ಕನಿಷ್ಠ ಖಚಿತವಾದ ಪಿಂಚಣಿ ಪಡೆಯುತ್ತಾರೆ ಎಂದು ಅವರು ವಿವರಿಸಿದ್ದಾರೆ.
ಇಂದು ಪ್ರಾರಂಭಿಸಲಾದ 'ಡೊನೇಟ್-ಎ-ಪೆನ್ಷನ್' ಕಾರ್ಯಕ್ರಮವು ಕಾರ್ಮಿಕ ಸಚಿವಾಲಯದ ಅನೇಕ ಉಪಕ್ರಮಗಳ ಭಾಗವಾಗಿದ್ದು, ಇಂದಿನಿಂದ ಮಾರ್ಚ್ 13 ರವರೆಗೆ 'ಐಕಾನಿಕ್ ವೀಕ್' ಹೆಸರಿನಲ್ಲಿ ಇಲಾಖೆ ಆಚರಿಸುತ್ತಿದೆ. ಇ-ಶ್ರಾಮ್ ಅಡಿಯಲ್ಲಿ 25 ಕೋಟಿ ಮಂದಿ ನೋಂದಣಿ ಮಾಡಿಸುವ ಉದ್ದೇಶ ಹೊಂದಿದೆ.
ದೇಶದಾದ್ಯಂತ 20 ಪ್ರಾದೇಶಿಕ ಕಚೇರಿಗಳಲ್ಲಿ ಮುಖ್ಯ ಕಾರ್ಮಿಕ ಆಯುಕ್ತರು ಇಡೀ ವಾರದಲ್ಲಿ ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಕ್ರಮವಾಗಿ ಕಾರ್ಮಿಕರು ಮತ್ತು ಉದ್ಯೋಗದಾತರ ಹಕ್ಕುಗಳು ಹಾಗೂ ಅನುಸರಣೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಸರ್ಕಾರದಿಂದ ಹಳೆಯ ಪಿಂಚಣಿ ಯೋಜನೆ ಮುಂದುವರಿಕೆ : ಇದು ಅವಿವೇಕದ ಕ್ರಮ ಎಂದು ತಜ್ಞರು