ಹಜಾರಿಬಾಗ್(ಜಾರ್ಖಂಡ್) : ಪ್ರತಿಭೆ ಯಾರ ಸ್ವತ್ತು ಅಲ್ಲ. ಮಹೇಶ್ ಕರಮಾಲಿ ಎಂಬ ವ್ಯಕ್ತಿ ಹಜಾರಿಬಾಗ್ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಬಿಷ್ಣುಗರ್ ಬ್ಲಾಕ್‌ನ ಉಚ್ಚಘನಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಮಹೇಶ್ನನ್ನು ಆತನ ಪೋಷಕರು ಬಾಲ್ಯದಲ್ಲಿ ಮುಂಬೈಗೆ ಕರೆದುಕೊಂಡು ಹೋದರು. ಬಡತನದ ಕಾರಣದಿಂದ ಅವನಿಗೆ ಓದಲು ಸಹ ಸಾಧ್ಯವಾಗಲಿಲ್ಲ. ಮೊದಲಿಗೆ ಅವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ನಂತರ ಕೆಲವು ಕಂಪನಿಯಲ್ಲಿ ಕೆಲಸ ಪಡೆದರು.
ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗದ ಕಾರಣ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಲಾಕ್‌ಡೌನ್ ಸಮಯದಲ್ಲಿ ಅವರು ಕಳೆದ ವರ್ಷ ಮುಂಬೈ ಬಿಟ್ಟು ಹೋಗಬೇಕಾಯಿತು. ಈ ವೇಳೆ ಉದ್ಯೋಗವಿಲ್ಲದೇ ಬಸವಳಿದಿದ್ದ ಮಹೇಶ್, ಕೃಷಿ ಮಾಡಲು ಯೋಜಿಸಿದರು. ಆದರೆ, ಅಲ್ಲಿಯೂ ಬಡತನ ಅವರ ಬೆನ್ನು ಬಿಡಲಿಲ್ಲ. ಹಾಗಾಗಿ, ಅವರು ಜಂಕ್ನಿಂದ ಪವರ್ ಟಿಲ್ಲರ್ ತಯಾರಿಸಲು ಯೋಚಿಸಿದರು.
ಮಹೇಶ್ ಮುಂಬೈನ ಗ್ಯಾರೇಜ್‌ನಲ್ಲಿ ಕೆಲಸ ಮಾಡುವಾಗ ಕಾರನ್ನು ರಿಪೇರಿ ಮಾಡಲು ಕಲಿತಿದ್ದರು. ಹಳೆಯ ಸ್ಕೂಟರ್ ಸ್ಕ್ರ್ಯಾಪ್ ಖರೀದಿಸಿದರು. ನಂತರ ಸ್ನೇಹಿತರ ಸಹಾಯದಿಂದ ಗೋಮಿಯಾದಲ್ಲಿ ಕೃಷಿ ಉಳುಮೆ ಯಂತ್ರವನ್ನು ತಯಾರಿಸಿದರು. ಮೂರು ದಿನಗಳ ಪರಿಶ್ರಮದ ನಂತರ, ಯಂತ್ರ ಸಿದ್ಧವಾಯಿತು.
ಈ ಉಳುಮೆ ಯಂತ್ರವನ್ನು ಬಹಳ ಕಷ್ಟಪಟ್ಟು ಹಳ್ಳಿಗೆ ತಂದಾಗ, ಅವರನ್ನು ಜನ ಗೇಲಿ ಮಾಡಿದರು. ಈಗ ಈ ಯಂತ್ರವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಈಗ ಸುತ್ತಮುತ್ತಲಿನ ಹಳ್ಳಿಗಳ ಜನರು ಸಹ ವಿದ್ಯುತ್ ಟಿಲ್ಲರ್‌ಗಳನ್ನು ತಯಾರಿಸಲು ಇವರಿಗೆ ಆರ್ಡರ್ ನೀಡುತ್ತಿದ್ದಾರೆ. ಮಹೇಶ್ ಕಡಿಮೆ ವೆಚ್ಚದಲ್ಲಿ ಬಡವರಿಗಾಗಿ ಯಂತ್ರಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ.
![ಹಳೆಯ ಸ್ಕೂಟರ್ ಸ್ಕ್ರ್ಯಾಪ್ನಿಂದ ಸಿದ್ಧವಾಯಿತು ಪವರ್ ಟಿಲ್ಲರ್](https://etvbharatimages.akamaized.net/etvbharat/prod-images/13343985_haz1.jpg)
ಮಹೇಶ್ ಕರಮಾಲಿ ತನಗೆ ಸರ್ಕಾರದ ಸಹಾಯ ಸಿಕ್ಕರೆ, ಒಂದು ಸಣ್ಣ ಗ್ಯಾರೇಜ್ ಅನ್ನು ನಿರ್ಮಿಸಬಹುದು. ಆ ಗ್ಯಾರೇಜ್ ಮೂಲಕ, ಪವರ್ ಟಿಲ್ಲರ್ ಸೇರಿ ಇತರ ಯಂತ್ರಗಳನ್ನು ಸಹ ತಯಾರಿಸಬಹುದು. ಇದು ಕೃಷಿಕರಿಗೆ ಸಹಾಯಕವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.