ತಿರುವನಂತಪುರ(ಕೇರಳ): ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ಕೆ.ವಿ.ಥಾಮಸ್ ಅವರನ್ನು ಗುರುವಾರ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಕೆ.ಸುಧಾಕರನ್ ತಿಳಿಸಿದ್ದಾರೆ. ಎಐಸಿಸಿ ಒಪ್ಪಿಗೆ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ಸುಧಾಕರನ್ ರಾಜಸ್ಥಾನದ ಜೈಪುರದಲ್ಲಿದ್ದು ಕಾಂಗ್ರೆಸ್ ಪಕ್ಷದ ಚಿಂತನ್ ಶಿವರ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದಲೇ ಕೆ.ವಿ.ಥಾಮಸ್ ಅವರನ್ನು ಉಚ್ಛಾಟನೆಗೊಳಿಸುವ ಆದೇಶ ಹೊರಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಂದಿನಿಂದ (ಶುಕ್ರವಾರ) ಚಿಂತನ್ ಶಿವರ್ ಆರಂಭವಾಗಲಿದ್ದು, ಮೂರು ದಿನ ನಡೆಯಲಿದೆ.
ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಪಿಐ(ಎಂ) ನಾಯಕ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಥಾಮಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪಕ್ಷದ ರಾಜ್ಯ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕೆ.ವಿ.ಥಾಮಸ್ ಮುಂಬರುವ ಉಪಚುನಾವಣೆಯಲ್ಲಿ ತೃಕ್ಕಾಕರ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಅಭ್ಯರ್ಥಿಯಾದ ಜೋ ಜೋಸೆಫ್ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು.
ನಂತರ ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, 'ನಾನು ಯಾವತ್ತೂ ಕಾಂಗ್ರೆಸ್ಸಿಗನೇ. ಪಕ್ಷ ಬಿಡುವುದಿಲ್ಲ ಅಥವಾ ಬೇರೆ ಯಾವುದೇ ಪಕ್ಷ ಸೇರುವುದಿಲ್ಲ. ಕಾಂಗ್ರೆಸ್ಸಿಗನಾಗಿಯೂ ಎಲ್‌ಡಿಎಫ್‌ನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ' ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ತಾಜ್ಮಹಲ್ನ 22 ಬಾಗಿಲು ತೆರೆಸಲು ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಕೋರ್ಟ್