ಜೈಪುರ್(ರಾಜಸ್ಥಾನ): ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಮಹಿಳೆ ಬೆಳೆದು ನಿಂತಿದ್ದು, ಆತನಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾಳೆ. ಇಷ್ಟೆಲ್ಲದರ ಮಧ್ಯೆ ರಾಜಸ್ಥಾನದಲ್ಲೊಂದು ಅನಿಷ್ಟ ಪದ್ಧತಿ ಜಾರಿಯಲ್ಲಿದೆ. ಮದುವೆಯಾದ ರಾತ್ರಿ ವಧುವಿಗೆ ಕುಕ್ಡಿ ಎಂಬ ಪದ್ಧತಿ ಹೆಸರಿನಲ್ಲಿ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತದೆ. ಇದು ಶತ ಶತಮಾನಗಳಿಂದ ಮಹಿಳೆಯರ ಮೇಲೆ ನಡೆದು ಬಂದಿರುವ ಈ ಅವಮಾನ, ಇನ್ನೂ ಸಮಾಜದಲ್ಲಿ ಉಳಿದು ಕೊಂಡಿದೆ.
ಬದಲಾಗುತ್ತಿರುವ ಕಾಲದಲ್ಲೂ ರಾಜಸ್ಥಾನದ ಭಿಲ್ವಾರ ಎಂಬಲ್ಲಿ ಇಂತಹದೊಂದು ಅನಿಷ್ಟ ಪದ್ಧತಿ ಜಾರಿಗೆ ಇರುವುದು ಕಂಡು ಬಂದಿದೆ. ಇದರ ಮೂಲಕ ವಧು ಮೊದಲ ರಾತ್ರಿ ಗಂಡನೊಂದಿಗೆ ದೈಹಿಕ ಸಂಪರ್ಕ ನಡೆಸಿದಾಗ ಬಿಳಿಯ ಹಾಸಿಗೆ (ರಕ್ತ) ಕಲೆಯಾಗಬೇಕು. ಇದನ್ನ ಬೆಳಗ್ಗೆ ಗ್ರಾಮದ ಎಲ್ಲರಿಗೂ ತೋರಿಸಲೇಬೇಕು. ಅದರ ಮೂಲಕ ಆಕೆಗೆ ಶೀಲದ ಸರ್ಟಿಫಿಕೇಟ್ ನೀಡುವುದರ ಜೊತೆಗೆ, ಗಂಡನ ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಅಂತಿಮ ಮುದ್ರೆ ಹಾಕುತ್ತಾರೆ.
ಏನಿದು ಪ್ರಕರಣ?: ರಾಜಸ್ಥಾನದ ಬಿಲ್ವಾರದಲ್ಲಿ ವಾಸವಾಗಿದ್ದ ಯುವತಿಯೊಬ್ಬಳ ಮೇಲೆ ಕಳೆದ ಕೆಲ ದಿನಗಳ ಹಿಂದೆ ಅತ್ಯಾಚಾರ ನಡೆದಿತ್ತು. ಘಟನೆ ಬಗ್ಗೆ ಯಾರಿಗಾದ್ರೂ ಹೇಳಿದರೆ ಸಹೋದರನ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನು. ಹೀಗಾಗಿ, ಸಂತ್ರಸ್ತೆ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಪ್ರಕರಣ ನಡೆದು, ಕೆಲ ದಿನಗಳ ನಂತರ ಯುವತಿಗೆ ಮದುವೆಯಾಗಿದೆ.
ಆ ಸಮುದಾಯದಲ್ಲಿ ಆಚರಣೆ ಇರುವ ಪ್ರಕಾರ ಮೊದಲ ರಾತ್ರಿ ಗಂಡನೊಂದಿಗೆ ದೈಹಿಕ ಸಂಪರ್ಕದ ವೇಳೆ ಕುಕ್ಡಿ ಪದ್ಧತಿ ನಡೆಸಲಾಗಿದ್ದು, ವಧು ತಪ್ಪಿತಸ್ಥೆ ಎಂದು ಕಂಡು ಬಂದಿದೆ. ಈ ವೇಳೆ, ವಿಚಾರಣೆ ನಡೆಸಿದಾಗ, ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ವಧುವಿನ ಕುಟುಂಬಕ್ಕೆ ಶಿಕ್ಷೆ ವಿಧಿಸಲು ಗ್ರಾಮದ ಪಂಚರು ಮುಂದಾಗಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿ ಸಂತ್ರಸ್ತೆ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: 'ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುತ್ತೇವೆ'; ಸೋಲಿನ ಬಳಿಕ ಮೆಂಟರ್ ಗಂಭೀರ್ ಹೃದಯಸ್ಪರ್ಶಿ ಸಂದೇಶ
ಏನಿದು ಕುಕ್ಡಿ ಪದ್ಧತಿ:? ರಾಜಸ್ಥಾನದ ಸಾನ್ಸಿ ಸಮುದಾಯದಲ್ಲಿ ಕುಕ್ಡಿ ಪದ್ಧತಿ ಈ ಹಿಂದಿನಿಂದಲೂ ಜಾರಿಯಲ್ಲಿದೆ. ಮದುವೆಯಾದ ನಂತರ ಪತಿ-ಪತ್ನಿಯರ ನಡುವೆ ಈ ಆಚರಣೆ ನಡೆಯುತ್ತದೆ. ಈ ವೇಳೆ, ಮಹಿಳೆ ಅಗ್ನಿಪರೀಕ್ಷೆಗೊಳಗಾಗಿ ತಾನು ಶೀಲವಂತೆ ಎಂದು ತೋರಿಸಬೇಕು. ಮೊದಲ ರಾತ್ರಿಯ ಶಾರೀರಿಕ ಸಂಬಂಧದ ವೇಳೆ ಬಿಳ್ಳಿಯ ಬೆಡ್ಶೀಟ್ ಹಾಕಲಾಗುತ್ತದೆ. ಅದರ ಮೇಲೆ ರಕ್ತದ ಕಲೆಯಾಗಬೇಕು. ಅದನ್ನ ಮರುದಿನ ಎಲ್ಲರಿಗೂ ತೋರಿಸಲಾಗುತ್ತದೆ. ಅದರ ಮೇಲೆ ರಕ್ತದ ಕಲೆಗಳು ಇದ್ದರೆ ಮಾತ್ರ ಆಕೆಯನ್ನ ಹೆಂಡತಿಯಾಗಿ ಸ್ವೀಕರಿಸಲಾಗುತ್ತದೆ.
ರಕ್ತದ ಕುರುಹು ಇಲ್ಲದಿದ್ದರೆ, ಈ ಮೊದಲು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಗಿ ನಂಬಲಾಗುತ್ತದೆ. ಈ ವೇಳೆ, ಪಂಚಾಯ್ತಿ ಸೇರಿಸಿ, ಆಕೆಯನ್ನ ಮನೆಯಿಂದ ಹೊರಹಾಕುವ ಅಥವಾ, ಹೆಚ್ಚಿನ ವರದಕ್ಷಿಣೆ ಕೇಳುವ ಕೆಲಸ ಅಥವಾ ಸಮುದಾಯದಿಂದಲೇ ಬಹಿಷ್ಕಾರ ಹಾಕುವ ಕೆಲಸ ಮಾಡುತ್ತಾರೆ.
ಹಿಂದಿನಿಂದಲೂ ಈ ಪದ್ಧತಿ ಜಾರಿಯಲ್ಲಿರುವ ಕಾರಣ ಅನೇಕ ಬಡ ಕುಟುಂಬಗಳು ತಮ್ಮ ಮನೆ, ಜಮೀನು ಮಾರಾಟ ಮಾಡಿ ಹೆಚ್ಚಿನ ವರದಕ್ಷಿಣೆ ನೀಡಿರುವ ಉದಾಹರಣೆಗಳಿವೆ. ತಪ್ಪಿತಸ್ಥರು ಎಂದು ಕಂಡುಬರುವ ಕುಟುಂಬಕ್ಕೆ 5ರಿಂದ 10 ಲಕ್ಷ ರೂ ದಂಡ ವಿಧಿಸುವ ಕೆಲಸ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆ, ಜಮೀನು ಮಾರಾಟ ಮಾಡಿರುವ ಉದಾಹರಣೆಗಳಿವೆ.