ನವದೆಹಲಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಸಂಬಂಧ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ 2 ವಾರಗಳಲ್ಲಿ ಉತ್ತರ ನೀಡುವಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ತಮ್ಮ ಮನವಿಗಳ ಬಗ್ಗೆ ಸಂಕ್ಷಿಪ್ತ ಲಿಖಿತ ಮಾಹಿತಿ ನೀಡುವಂತೆಯೂ ಕೋರ್ಟ್ ಕೇಳಿದೆ.
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (KWDT) ಅಂತಿಮ ತೀರ್ಪು ಪ್ರಕಟಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಮನವಿಗಳ ಕುರಿತು ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್‌ನಲ್ಲಿ ಎರಡು ವಾರಗಳ ಕಾಲಾವಕಾಶ ಕೋರಿದೆ. ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಾಗ ಹಿರಿಯ ವಕೀಲ ವಸೀಂ ಖಾದ್ರಿ, ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸೂಚನೆಗಳನ್ನು ಪಡೆಯಲು ಎರಡು ವಾರಗಳ ಕಾಲಾವಕಾಶವನ್ನು ಕೋರಿದರು. ಈ ವಿಷಯವು ಉನ್ನತ ಮಟ್ಟದಲ್ಲಿ ಪರಿಗಣನೆಯಲ್ಲಿದೆ ಎಂತಲೂ ನ್ಯಾಯವಾದಿಗಳು ಕೋರ್ಟ್‌ಗೆ ಹೇಳಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡಕ್ಕೂ ತಮ್ಮ ಮನವಿಗಳ ಬಗ್ಗೆ ಸಂಕ್ಷಿಪ್ತ ಲಿಖಿತ ಸಲ್ಲಿಕೆಗೆ ಸೂಚಿಸಿ ಡಿಸೆಂಬರ್ 13 ರಂದು ಪರಿಗಣನೆಗೆ ಇಡುವಂತೆ ನ್ಯಾಯಾಲಯ ಹೇಳಿದೆ. 2022ರ ಜೂನ್‌ನಿಂದ ಸುಮಾರು 5.94 ಲಕ್ಷ ಹೆಕ್ಟೇರ್ ಭೂಮಿಗೆ ನೀರು ನೀಡಲು 75 ಟಿಎಂಸಿ ಅಡಿ ಕೃಷ್ಣಾ ನದಿ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಶೀಘ್ರ ಅಧಿಸೂಚನೆಗಾಗಿ ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು. ವಿಶೇಷ ರಜೆ ಅರ್ಜಿಯ ಅಂತಿಮ ವಿಲೇವಾರಿ ನ್ಯಾಯಾಲಯದ ಮುಂದೆ ಮುಕ್ತಾಯಗೊಳ್ಳಲು ವರ್ಷಗಳು ಬೇಕಾಗುತ್ತವೆ ಎಂದು ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕಾನೂನು ಕೋಶ ಬಲಿಷ್ಠಗೊಳಿಸಲು ಸಿಎಂ ಸೂಚನೆ!