ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಆವರಣದ ಸಮೀಕ್ಷೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲು ಉಚ್ಛ ನ್ಯಾಯಾಲಯ ಅನುಮತಿ ನೀಡಿದೆ.
ಮಸೀದಿಯ ಸಮೀಕ್ಷೆಯ ಮೇಲ್ವಿಚಾರಣೆಗೆ ಅಡ್ವೊಕೇಟ್ ಕಮಿಷನರ್ (Advocate Commissioner) ನೇಮಕಕ್ಕೆ ಹೈಕೋರ್ಟ್ ತನ್ನ ಆದೇಶದಲ್ಲಿ ಒಪ್ಪಿಗೆ ನೀಡಿದೆ. ಡಿಸೆಂಬರ್ 18ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ಸಮೀಕ್ಷೆಯ ವಿಧಾನಗಳನ್ನು ಚರ್ಚಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಮತ್ತೊಂದೆಡೆ, ಇದು ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು ಎಂದು ಸೂಚಿಸುವ ಕಲಾಕೃತಿಗಳನ್ನು ಹೊಂದಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಹಿಂದೂ ಸಂಘಟನೆಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ''ಅಡ್ವೊಕೇಟ್ ಕಮಿಷನರ್ ಮೂಲಕ (ಶಾಹಿ ಈದ್ಗಾ ಮಸೀದಿ) ಸಮೀಕ್ಷೆಗೆ ಒತ್ತಾಯಿಸಿದ್ದ ನಮ್ಮ ಅರ್ಜಿಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಸಮೀಕ್ಷೆ ವಿಧಾನಗಳನ್ನು ಡಿಸೆಂಬರ್ 18ರಂದು ನಿರ್ಧರಿಸಲಾಗುತ್ತದೆ'' ಎಂದು ತಿಳಿಸಿದರು.
ಮುಂದುವರೆದು ಅವರು, ''ನ್ಯಾಯಾಲಯವು ಶಾಹಿ ಈದ್ಗಾ ಮಸೀದಿ ವಾದಗಳನ್ನು ತಿರಸ್ಕರಿಸಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಾಲಯದ ಹಲವು ಚಿಹ್ನೆಗಳು ಮತ್ತು ಸಂಕೇತಗಳು ಇವೆ. ವಾಸ್ತವ ಸ್ಥಿತಿಯನ್ನು ತಿಳಿಯಲು ಅಡ್ವೊಕೇಟ್ ಕಮಿಷನರ್ ಅಗತ್ಯವಿದೆ ಎಂಬುದು ನಮ್ಮ ಬೇಡಿಕೆಯಾಗಿತ್ತು. ಇದಕ್ಕೆ ಮನ್ನಣೆ ಸಿಕ್ಕಿದ್ದು, ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ'' ಎಂದು ಹೇಳಿದರು.
ಇದೇ ವೇಳೆ, ಈ ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಹೊಸ ಮೊಕದ್ದಮೆಗಳನ್ನು ನ್ಯಾಯಾಲಯವು ಸ್ವತಃ ವರ್ಗಾಯಿಸಿದೆ. ಈ ಮೊಕದ್ದಮೆಗಳ ವರ್ಗಾವಣೆಯ ಬಗ್ಗೆ ಸಂಬಂಧಿತ ಅರ್ಜಿದಾರರಿಗೆ ನೋಟಿಸ್ ನೀಡುವಂತೆ ಮಥುರಾದ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದೆ.
ಇನ್ನು, ಪ್ರಕರಣದ ಕುರಿತು ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಮತ್ತು ಇತರ ಏಳು ಮಂದಿಯಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಮೂಲ ದಾವೆಯ ಭಾಗವಾಗಿದೆ. ಮಸೀದಿಯಡಿ ಶ್ರೀಕೃಷ್ಣನ ಜನ್ಮಸ್ಥಳ ಇದೆ. ಕಮಲದ ಆಕಾರದ ಸ್ತಂಭ ಮತ್ತು ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ಹಿಂದೂ ದೇವತೆಯಾದ ಶೇಷನಾಗ್ನ ಚಿತ್ರ ಸೇರಿದಂತೆ ಹಿಂದೂ ದೇವಾಲಯದ ಗೋಚರ ಚಿಹ್ನೆಗಳು ಇವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Mathura: ಮಥುರಾ ದೇಗುಲದ ಬಳಿ ತೆರವು ಕಾರ್ಯ: 10 ದಿನ ಯಥಾಸ್ಥಿತಿಗೆ ಸುಪ್ರೀಂ ಕೋರ್ಟ್ ಆದೇಶ