ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬೊಮ್ಮನಹಳ್ಳಿಯ ಕಿಂದರಿ ಜೋಗಿಯ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಕಿಂದರಿ ಜೋಗಿಯು ತುಂಗಾನದಿಯ ದಡದಲ್ಲಿದ್ದ ಬೊಮ್ಮನಹಳ್ಳಿಗೆ ಅಂಟಿಕೊಂಡಿದ್ದ ಇಲಿಗಳ ಕಾಟವನ್ನು ತನ್ನ ಸುಮಧುರ ಕಿನ್ನರಿ ವಾದನ ಮೂಲಕ ನಿವಾರಿಸಿದ. ಜೊತೆಗೆ ಜನರ ಗೋಳಾಟವನ್ನು ನಿವಾರಣೆ ಮಾಡಿದ ಎಂದು ಕುವೆಂಪು ಅವರು ಬರೆದ ಪದ್ಯದಲ್ಲಿ ಓದಿದ್ದೆವು.
ಇದೇ ರೀತಿಯ ಸಮಸ್ಯೆ ಕೋಲ್ಕತ್ತಾ ನಗರದಲ್ಲೂ ಉಂಟಾಗಿದೆ. ಇಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ನಗರದ ಅಡಿಯಲ್ಲಿ ಇಲಿಗಳು ಬೃಹತ್ ಬಿಲಗಳನ್ನು ಕೊರೆದಿವೆ. ಇದು ನಗರಕ್ಕೆ ಕಂಟಕವಾಗುವ ಮುನ್ಸೂಚನೆಯನ್ನು ನೀಡಿದೆ. ಇದರಿಂದಾಗಿ ನಗರವು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಆತಂಕವೂ ವ್ಯಕ್ತವಾಗಿದೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೋಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್, ನಗರದಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳ ಅಡಿಯಲ್ಲಿ ಇಲಿಗಳು ಬಿಲಗಳನ್ನು ಕೊರೆದಿದ್ದು, ನಗರಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇದೆ. ಜನರು ರಸ್ತೆ ಬದಿಗಳಲ್ಲಿ ಆಹಾರವನ್ನು ತಿಂದು ಅಲ್ಲೇ ಬಿಸಾಡುತ್ತಿದ್ದಾರೆ. ಇದರಿಂದ ಇಲಿಗಳಿಗೆ ಆಹಾರ ಸಿಗುತ್ತಿದೆ. ಇದು ಇಲಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂಬಂಧ ಎಲ್ಲಾ ರಸ್ತೆ ಬದಿಗಳಲ್ಲಿ ಇರುವ ತಿಂಡಿ ವ್ಯಾಪಾರಿಗಳು ತ್ಯಾಜ್ಯಗಳನ್ನು ಬಿಸಾಡಲು ಸರಿಯಾದ ವ್ಯವಸ್ಥೆಗಳನ್ನು ಮಾಡಬೇಕು. ಇದರ ಜೊತೆಗೆ ಕಸವನ್ನು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಬಿಸಾಡಬೇಕು. ಇದರಿಂದ ನಗರದಲ್ಲಿ ಉಂಟಾಗಿರುವ ಇಲಿಯ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಹೇಳಿದರು.
“ರಸ್ತೆ ಬದಿ ವ್ಯಾಪಾರಿಗಳು ಆಹಾರ ತ್ಯಾಜ್ಯವನ್ನು ಸಂಸ್ಕರಿಸುವ ವಿವಿಧ ವಿಧಾನಗಳನ್ನು ಅನ್ವೇಷಿಸಬೇಕು. ನಿರ್ದಿಷ್ಟವಾಗಿ ಸೂಚಿಸಿರುವ ಮೈದಾನಗಳಲ್ಲಿ ಮಾತ್ರ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು. ಇದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ)ಗೆ ರಸಗೊಬ್ಬರನ್ನು ಉತ್ಪಾದಿಸಲು ಸಹಕಾರಿಯಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಮೇಯರ್ ಎಚ್ಚರಿಕೆ ರವಾನಿಸಿದರು.
ನಗರದ ದಕ್ಷಿಣ ಭಾಗದಲ್ಲಿ ಧಾಕುರಿಯಾ ಮೇಲ್ಸೇತುವೆಯ ಉಂಟಾಗಿರುವ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಈ ಮೇಲ್ಸೆತುವೆಯಲ್ಲಿ ಇಲಿಗಳು ಬಿಲಗಳನ್ನು ಕೊರೆಯುವುದರಿಂದ ಸೇತುವೆಯ ಅಡಿಗೆ ಹಾಕಿರುವ ಮಣ್ಣು ಸಡಿಲಗೊಳ್ಳುತ್ತದೆ. ಇದು ಮೇಲ್ಸೇತುವೆ ಕುಸಿತಕ್ಕೆ ಕಾರಣವಾಗಬಹುದು. ಅದೇ ರೀತಿ ನಗರದಲ್ಲೂ ಇಲಿಗಳು ಭೂಮಿಯನ್ನು ಕೊರೆಯುವುದರಿಂದ ಕ್ರಮೇಣ ನಗರದ ಮೇಲ್ಮೈ ಕುಸಿತ ಉಂಟಾಗಬಹುದು ಎಂದು ಹೇಳಿದರು.
ಧಾಕುರಿಯಾ ಸೇತುವೆಯಲ್ಲಿ ಇಲಿಗಳ ಹಾವಳಿಯನ್ನು ತಡೆಯಲು, ನಾವು ಸಿಮೆಂಟ್ನೊಂದಿಗೆ ಗಾಜು ಮಿಶ್ರಣ ಮಾಡಿದ್ದೆವು. ಆದರೂ ಇಲಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಹಲ್ದಿರಾಮ್ ಬಳಿಯ ಎಜೆಸಿ ಬೋಸ್ ರಸ್ತೆ ಪ್ರದೇಶಗಳಲ್ಲಿ ಇಲಿಗಳು ರಂಧ್ರಗಳನ್ನು ಕೊರೆದಿದೆ. ಈ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸದಿದ್ದರೆ ಪ್ಲೇಗ್ ಮುಂತಾದ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೇಳಿದರು. ನಮ್ಮ ನಿಮ್ಮೆಲ್ಲರ ಸಂಘಟಿತ ಪ್ರಯತ್ನದಿಂದ ನಾವು ನಗರವನ್ನು ಅಪಾಯದಿಂದ ರಕ್ಷಿಸಬಹುದು ಎಂದು ಇದೇ ವೇಳೆ ಮೇಯರ್ ತಿಳಿಸಿದರು.
ಇದನ್ನೂ ಓದಿ : IndiGo flight: ಇಂಡಿಗೋ ವಿಮಾನದ ತುರ್ತು ನಿರ್ಗಮನದ ಕವರ್ ತೆರೆದ ವ್ಯಕ್ತಿ ವಿರುದ್ಧ ಎಫ್ಐಆರ್