ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿ ಆರೋಪಿಯೋರ್ವನ ಸಾವಿನ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕೊಡಂಗಯ್ಯೂರು ಪೊಲೀಸರು ಶನಿವಾರ ರಾಜಶೇಖರ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆತನ ವಿರುದ್ಧ 20ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ವೇಳೆ ರಾಜಶೇಖರ್, ತನಗೆ ಅಸ್ವಸ್ಥತೆ ಹಾಗೂ ತಲೆ ಸುತ್ತುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವಾಂತಿಯಾಗಿ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು ಬೆಳಗ್ಗೆ 7 ಗಂಟೆ ಸುಮಾರಿಗೆ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ರಾಜಶೇಖರ್ ಬರುವ ದಾರಿಯಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ರಾಜಶೇಖರ್ ತೊಡೆಯಲ್ಲಿ ಗಾಯವಾಗಿರುವ ಬಗ್ಗೆ ತನಿಖೆಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಾವಿನ ಪ್ರಕರಣವನ್ನು ಸಿಬಿಸಿಐಡಿಗೆ ವರ್ಗಾಯಿಸಿ ತಮಿಳುನಾಡು ಡಿಜಿಪಿ ಆದೇಶ ಹೊರಡಿಸಿದ್ದಾರೆ. ಕೊಡುಂಗೈಯೂರ್ ಪೊಲೀಸ್ ಇನ್ಸ್‌ಪೆಕ್ಟರ್ ಜಾರ್ಜ್ ಮಿಲ್ಲರ್ ಪೊನ್‌ರಾಜ್, ಸಹಾಯಕ ಇನ್ಸ್‌ಪೆಕ್ಟರ್ ಕಣ್ಣಿಯಪ್ಪನ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಜಯಶೇಖರ್, ಮಣಿವಣ್ಣನ್ ಮತ್ತು ಕಾನ್‌ಸ್ಟೆಬಲ್ ಸತ್ಯಮೂರ್ತಿ ಅವರನ್ನು ಅಮಾನತುಗೊಳಿಸಿ ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಆದೇಶಿಸಿದ್ದಾರೆ.
ಇದನ್ನೂ ಓದಿ : NRI ಕೊಲೆ ಪ್ರಕರಣ: ವಿವಾಹೇತರ ಸಂಬಂಧಕ್ಕೆ ಅಡ್ಡಿ ಕಾರಣಕ್ಕಾಗಿ ಲವರ್ ಜತೆಗೂಡಿ ಗಂಡನನ್ನೇ ಉಡಾಯಿಸಿದ ಪತ್ನಿ!