ನವದೆಹಲಿ: ಮನೆಯಲ್ಲೇ ಕೋವಿಡ್-19 ಪರೀಕ್ಷೆಯನ್ನು ನಡೆಸಲು ರ್‍ಯಾಪಿಡ್ ಆ್ಯಂಟಿಜೆನ್ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ನೀಡಿದೆ.
'ಕೋವಿಸೆಲ್ಫ್' (The CoviSelfTM (PathoCatch) COVID-19 OTC Antigen LF) ಹೆಸರಿನ ಈ ದೇಶೀಯ ರ್‍ಯಾಪಿಡ್ ಆ್ಯಂಟಿಜೆನ್ ಕಿಟ್ ಅನ್ನು ಪುಣೆಯ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ತಯಾರಿಸಿದೆ.

ಇದನ್ನು ಯಾರು ಮತ್ತು ಹೇಗೆ ಬಳಸಬಹುದು ಎಂಬುದರ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.
- ರೋಗಲಕ್ಷಣವಿರುವವರು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಮಾತ್ರ ತಕ್ಷಣವೇ ಈ ಹೋಂ ಟೆಸ್ಟ್ ಮಾಡಿಸಿಕೊಳ್ಳಲು ಐಸಿಎಂಆರ್ ಸಲಹೆ ನೀಡಿದೆ.
- ಮನಸೋಇಚ್ಛೆ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗುವುದಿಲ್ಲ
- ಮೊದಲು ಹೋಮ್ ಟೆಸ್ಟಿಂಗ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು
- ಅಪ್ಲಿಕೇಶನ್‌ನಲ್ಲಿ ವಿವರಿಸಿದ ಕಾರ್ಯವಿಧಾನದ ಪ್ರಕಾರ ಪ್ರಕ್ರಿಯೆಯನ್ನು ನಡೆಸಬೇಕು
- ಪರೀಕ್ಷೆ ಮುಗಿದ ಬಳಿಕ ಟೆಸ್ಟ್ ಸ್ಟ್ರಿಪ್ನಲ್ಲಿ ಕಾಣುವ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು
- ಈ ಟೆಸ್ಟ್ನಲ್ಲಿ ವರದಿ ಪಾಸಿಟಿವ್ ಬಂದರೆ ಅದು ನಿಜವಾಗಿರುತ್ತದೆ. ಹೀಗಾಗಿ ಸುಳ್ಳೆಂದುಕೊಂಡು ಮತ್ತೊಮ್ಮೆ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ
- ಪಾಸಿಟಿವ್ ಬಂದವರು https://www.icmr.gov.in/chomecare.html - ಇಲ್ಲಿ ನೀಡಿರುವ ಐಸಿಎಂಆರ್ ಹಾಗೂ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳಂತೆ ಹೋಮ್ ಐಸೋಲೇಷನ್ಗೆ ಒಳಗಾಗಬೇಕು.
- ನೆಗೆಟಿವ್ ಬಂದವರು ತಕ್ಷಣವೇ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು
- ಎಲ್ಲಾ ಡೇಟಾವನ್ನು ಸಂಗ್ರಹಿಸಲಾಗುತ್ತದೆ, ಆದರೆ ರೋಗಿಯ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಂಡಿರುವ ಈ ವೇಳೆಯಲ್ಲಿ ಕೊರೊನಾ ಪರೀಕ್ಷೆ ನಡೆಸಲು ಪ್ರಯೋಗಾಲಯಗಳು ಕೆಲವು ಒತ್ತಡಗಳನ್ನು ಎದುರಿಸುತ್ತಿವೆ. ಕಳೆದ ಮಂಗಳವಾರ ಒಂದೇ ದಿನ ದಾಖಲೆಯ 20 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಭಾರತಕ್ಕೆ ದಿನಕ್ಕೆ 33 ಲಕ್ಷ ಸ್ಯಾಂಪಲ್ಗಳನ್ನು ಟೆಸ್ಟ್ಗೆ ಒಳಪಡಿಸುವ ಸಾಮರ್ಥ್ಯವಿದ್ದು, ಸರಾಸರಿ 18 ಲಕ್ಷ ಟೆಸ್ಟ್ ನಡೆಸಲಾಗುತ್ತಿದೆ. ಹೀಗಾಗಿ ಕೋವಿಡ್ ಹೋಮ್ ಟೆಸ್ಟ್ ಹೆಚ್ಚು ಉಪಯುಕ್ತವಾಗಲಿದೆ.