ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಅಭದ್ರತೆ ಮತ್ತು ಅಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷವಾಗಿ ಬದಲಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಜಿ20 ನಾಯಕರಿಗೆ ಬುಧವಾರ ಮನವಿ ಮಾಡಿದ್ದಾರೆ. ಇದರ ಜೊತೆಗೆ, ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯ ಘೋಷಣೆಯನ್ನೂ ಅವರು ಸ್ವಾಗತಿಸಿದರು.
ಜಿ20 ನಾಯಕರ ಡಿಜಿಟಲ್ ಶೃಂಗಸಭೆಯಲ್ಲಿ ಆರಂಭಿಕ ಭಾಷಣ ಮಾಡುತ್ತಾ, ಭಯೋತ್ಪಾದನೆ ಸ್ವೀಕಾರಾರ್ಹವಲ್ಲ. ಅದರ ವಿರುದ್ಧ ನಾವು ಶೂನ್ಯ ಸಹಿಷ್ಣುತೆಯ ನೀತಿ ಹೊಂದಿದ್ದೇವೆ. ಇದೇ ವೇಳೆ, ನಾಗರಿಕರ ಸಾವು ಎಲ್ಲೇ ಸಂಭವಿಸಿದರೂ ಅದು ಖಂಡನೀಯ. ವಿಶೇಷವಾಗಿ ಅಮಾಯಕ ಮಕ್ಕಳು ಮತ್ತು ಮಹಿಳೆಯರ ಹತ್ಯೆಯನ್ನು ಒಪ್ಪಲಾಗದು. ಇನ್ನು, ಇಸ್ರೇಲ್-ಪ್ಯಾಲೆಸ್ಟೀನ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಎರಡು ರಾಜ್ಯಗಳ ಪರಿಹಾರ ಅಗತ್ಯವಿದೆ. ಇಂತಹ ಪ್ರಾದೇಶಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ರಾಜತಾಂತ್ರಿಕತೆ ಮತ್ತು ಮಾತುಕತೆಯೊಂದೇ ಮುಂದಿರುವ ದಾರಿ ಎಂದು ಸಲಹೆ ನೀಡಿದರು.
ನಾವೆಲ್ಲರೂ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಖಂಡಿಸುತ್ತೇವೆ. ಪಶ್ಚಿಮ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಬೇಕು. ಇಸ್ರೇಲ್ ಮತ್ತು ಹಮಾಸ್ ನಡುವಿನ ಹೋರಾಟವು ಯಾವುದೇ ಪ್ರಾದೇಶಿಕ ಸ್ವರೂಪವನ್ನು ಪಡೆಯದಂತೆ ನೋಡಿಕೊಳ್ಳುವುದು ಸಹ ಮುಖ್ಯ. ಇಂದು ನಾವು ನೋಡುತ್ತಿರುವ ಬಿಕ್ಕಟ್ಟಿನ ಕಾರ್ಮೋಡಗಳ ಹೊರತಾಗಿಯೂ, ಜಾಗತಿಕ ಶಾಂತಿಗಾಗಿ ಕೆಲಸ ಮಾಡುವ ಶಕ್ತಿ ಹೊಂದಿದ್ದೇವೆ. ಮಾನವ ಕಲ್ಯಾಣದ ದೃಷ್ಟಿಕೋನದಿಂದ ನಾವು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಧ್ವನಿ ಎತ್ತಬೇಕು. ವಿಶ್ವದ ಮತ್ತು ಮಾನವೀಯತೆಯ ನಿರೀಕ್ಷೆಯನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತವು ಹಂತಹಂತವಾಗಿ ಮುನ್ನಡೆಯಲು ಸಿದ್ಧ ಎಂದರು.
ಜಿ20 ನಾಯಕರನ್ನು ಉದ್ದೇಶಿಸಿ ಮುಂದುವರೆದು ಮಾತನಾಡಿದ ಮೋದಿ, ಕಳೆದ ವರ್ಷ ನವೆಂಬರ್ 16ರಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ ಅವರು ಜಿ20 ಅಧ್ಯಕ್ಷ ಸ್ಥಾನವನ್ನು ಔಪಚಾರಿಕವಾಗಿ ನನಗೆ ಹಸ್ತಾಂತರಿಸಿದಾಗ ನಾನು ಈ ವೇದಿಕೆಯನ್ನು ಮಹತ್ವಾಕಾಂಕ್ಷೆಯ, ಕ್ರಿಯಾ-ಆಧಾರಿತ ಮತ್ತು ನಿರ್ಣಾಯಕವಾಗಿ ಮಾಡುತ್ತೇವೆ ಎಂದು ಹೇಳಿದ್ದೆ. ಒಂದು ವರ್ಷದಲ್ಲಿ ನಾವು ಒಟ್ಟಾಗಿ ಇದನ್ನು ಸಾಧಿಸಿದ್ದೇವೆ. ಜಿ20ಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಲ್ಲಿ 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ'ದಲ್ಲಿ ನಂಬಿಕೆ ಇಟ್ಟು ವಿವಾದಗಳಿಂದ ದೂರ ಸರಿದು ಒಗ್ಗಟ್ಟು, ಸಹಕಾರದಿಂದ ಕೆಲಸ ಮಾಡಿದ್ದೇವೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ "ವಸುಧೈವ ಕುಟುಂಬಕಂ" ಎಂಬ ಮನೋಭಾವದೊಂದಿಗೆ ಜಾಗತಿಕ ಸಂಸ್ಥೆಯು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಜಿ20ಯಲ್ಲಿ ಆಫ್ರಿಕನ್ ಯೂನಿಯನ್ ಅನ್ನು ದೆಹಲಿಯಲ್ಲಿ ನಾವೆಲ್ಲರೂ ಸ್ವಾಗತಿಸಿದ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಿ20 ವಿಶ್ವಕ್ಕೆ ನೀಡಿದ ಈ ಒಳಗೊಳ್ಳುವಿಕೆಯ ಸಂದೇಶವು ಅಭೂತಪೂರ್ವ. ಬಹು-ಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳು ಮತ್ತು ಜಾಗತಿಕ ಆಡಳಿತವನ್ನು ಸುಧಾರಿಸುವ ವಿಷಯದ ಬಗ್ಗೆ ಜಿ20ಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸುವಂತೆ ಎಲ್ಲಾ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ಒತ್ತಾಯ
ವರ್ಚುವಲ್ ಸಭೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಇದ್ದರು.