ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಡ್ಯಾಂಗ್ರಿ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಮೂರು ವಸತಿ ಗೃಹಗಳಿಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾರೆ. 13 ಜನರು ಗಾಯಗೊಂಡರು, ಅದರಲ್ಲಿ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಮತ್ತು ನಾಲ್ವರ ಸ್ಥಿತಿ ಗಂಭೀರವಾಗಿದೆ. ಪೊಲೀಸರು, ಭದ್ರತಾ ಪಡೆಗಳೊಂದಿಗೆ ಗ್ರಾಮಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುವರೆದಿವೆ ಮತ್ತು ದಾಳಿಕೋರರಿಗಾಗಿ ಹುಡುಕಾಟವನ್ನು ಪ್ರಾರಂಭಿಸಿವೆ ಎಂದು ಜಮ್ಮು ರೇಂಜ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.
ಬಂದೂಕುಧಾರಿಗಳು ಇನ್ನೂ ಹಲವು ವಸತಿ ಗೃಹಗಳಿಗೆ ನುಗ್ಗಲು ಯತ್ನಿಸಿದರಾದರೂ ವಿಫಲರಾಗಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ಚಕಮಕಿ ನಿಂತ ನಂತರ ಅಕ್ಕಪಕ್ಕದಲ್ಲಿದ್ದ ಜನರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ನಿಯೋಜಿಸಲಾದ ವೈದ್ಯರು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸೇನಾ ಸಮವಸ್ತ್ರ ಧರಿಸಿದ್ದ ಇಬ್ಬರು ಬಂದೂಕುಧಾರಿಗಳು ಅಲ್ಲಿನ ನಿವಾಸಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಗುಂಡು ತಗುಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಹತ್ತು ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಮಹಮೂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಪುಲ್ವಾಮಾ: ಸಿಆರ್‌ಪಿಎಫ್ ಅಧಿಕಾರಿಯ ಶಸ್ತ್ರಾಸ್ತ್ರ ಕಸಿದು ಪರಾರಿಯಾದ ವ್ಯಕ್ತಿ