ನವದೆಹಲಿ: 2018 ರಲ್ಲಿ ಬಳ್ಳಾರಿಯಲ್ಲಿ ಉಕ್ಕಿನ ಸ್ಥಾವರ ನಿರ್ಮಾಣ ಕುರಿತು ಮಾಡಿಕೊಂಡಿದ್ದ ಒಪ್ಪಂದ ಮುಕ್ತಾಯಗೊಳಿಸುವಂತೆ ದೇಶದ ಅತಿದೊಡ್ಡ ಉಕ್ಕು ಉತ್ಪಾದನಾ ಕಂಪನಿಯಾದ ಆರ್ಸೆಲರ್ ಮಿತ್ತಲ್‌ಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗಳನ್ನು ಹಿಂಪಡೆದಿರುವುದಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠದ ಮುಂದೆ ಕೆಐಎಡಿಬಿ ಪರ ವಕೀಲ ನಿಶಾಂತ್ ಪಾಟೀಲ್ ಮತ್ತು ಹಿರಿಯ ವಕೀಲ ಎಸ್ ಮುರಳೀಧರ್ ಅವರು ಶೋಕಾಸ್ ನೋಟಿಸ್ ಹಿಂಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕಂಪನಿ ವಿರುದ್ಧದ ನೋಟಿಸ್ಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದ ಉಕ್ಕು ಕಂಪನಿ ಕೆಐಎಡಿಬಿಗೆ ವಾಪಸ್ ಪಡೆಯಲು ಕೋರಿತ್ತು. ಇದೀಗ ಕೆಐಎಡಿಬಿ ತಾನು ಜಾರಿ ಮಾಡಿರುವ ನೋಟಿಸ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಇದರಿಂದ ಉಕ್ಕು ಕಂಪನಿಯ ಮನವಿ ಫಲಿಸಿದೆ ಎಂದು ಸುಪ್ರೀಂಕೋರ್ಟ್ ಹೇಳಿತು.
ಸ್ವಾಧೀನವಾದ ಭೂಮಿ ವಾಪಸ್: ಈ ವರ್ಷದ ಅಕ್ಟೋಬರ್‌ನಲ್ಲಿ ಭೂಸ್ವಾಧೀನದ ವಿಚಾರವಾಗಿ ಉಕ್ಕು ಕಂಪನಿ ಮತ್ತು ಕೆಐಎಡಿಬಿ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿತ್ತು. ವಿಶ್ವದ ಅತಿದೊಡ್ಡ ಉಕ್ಕು ಉತ್ಪಾದಕ ಕಂಪನಿಯಾದ ಆರ್ಸೆಲರ್ ಮಿತ್ತಲ್, ಸ್ವಾಧೀನಪಡಿಸಿಕೊಂಡ 2643 ಎಕರೆಗಳ ಸಂಪೂರ್ಣ ಭೂಮಿಯನ್ನು ಹಿಂದಿರುಗಿಸಲಾಗುವುದು. ಭೂಮಿಯನ್ನು ಉಳಿಸಿಕೊಳ್ಳಲು ಕಂಪನಿ ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಅಲ್ಲದೇ, ಪರಿಹಾರ ರೂಪವಾಗಿ ನೀಡಬೇಕಿದ್ದ ಹಣವನ್ನು ಕಂಪನಿಯು ಪಾವತಿಸಿರುವ 267 ಕೋಟಿ ರೂ.ಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದೂ ಹೇಳಿತ್ತು.
ಬದಲಾದ ಸನ್ನಿವೇಶದಲ್ಲಿ ಭೂಮಿಯನ್ನು ಇಟ್ಟುಕೊಳ್ಳಲು ಕಂಪನಿ ಬಯಸುವುದಿಲ್ಲ. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮರಳಿಸಲಾಗುವುದು. ಕರ್ನಾಟಕದ ಬಳ್ಳಾರಿಯಲ್ಲಿ 6 ಮಿಲಿಯನ್ ಟನ್ ಉಕ್ಕಿನ ಕಾರ್ಖಾನೆಯ ನಿರ್ಮಾಣದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಕಂಪನಿ ಪರ ವಕೀಲರು ತಿಳಿಸಿದ್ದರು. ಆಗ ಸುಪ್ರೀಂಕೋರ್ಟ್ ಕೆಐಎಡಿಬಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.
ಪರಿಹಾರಕ್ಕೆ ಸೂಚಿಸಿದ್ದ ಕೋರ್ಟ್; 2010ರಲ್ಲಿ ಬಳ್ಳಾರಿಯಲ್ಲಿ ಉಕ್ಕಿನ ಸ್ಥಾವರ ಸ್ಥಾಪನೆಗಾಗಿ ಕೆಐಎಡಿಬಿಯಿಂದ ಪಡೆದುಕೊಂಡಿರುವ 300 ಎಕರೆ ಭೂಮಿಗೆ ತಲಾ 30 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆರ್ಸೆಲರ್ ಮಿತ್ತಲ್ ಕಂಪನಿಗೆ ಈ ವರ್ಷದ ಫೆಬ್ರವರಿಯಲ್ಲಿ ಆದೇಶಿಸಿತ್ತು. ಬಳ್ಳಾರಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಒಟ್ಟಾರೆ 4865.64 ಎಕರೆ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ನೀಡಿದ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಕಂಪನಿ ಕೋರಿತ್ತು. ಇದರ ವಿರುದ್ಧ ರೈತರ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.
ಇದೇ ವೇಳೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಫೆಬ್ರವರಿ 4 ಮತ್ತು ಮಾರ್ಚ್ 3 ರಂದು ಉಕ್ಕು ಉತ್ಪಾದಕ ಕಂಪನಿಗೆ ಒಪ್ಪಂದ ಮುಕ್ತಾಯಕ್ಕೆ ಸೂಚಿಸಿ ಶೋಕಾಸ್ ನೋಟಿಸ್ ನೀಡಿತ್ತು.
ಇದನ್ನೂ ಓದಿ: ಬಳ್ಳಾರಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ 2,643 ಎಕರೆ ಭೂಮಿ ಹಿಂದಿರುಗಿಸಲು ಅರ್ಸೆಲರ್ ಮಿತ್ತಲ್ ನಿರ್ಧಾರ