ನವದೆಹಲಿ: ಕಳೆದ ಸೋಮವಾರದಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ವಿವಿಧ ವಿಷಯಗಳನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿವೆ. ಇದೀಗ ಸಂಸತ್ನಲ್ಲಿ ಮಾಧ್ಯಮಗಳ ಮೇಲೆ ಹಾಕಿರುವ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಅಧ್ಯಕ್ಷರಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.
ರಾಜ್ಯಸಭೆ ಅಧ್ಯಕ್ಷರಾಗಿರುವ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಪತ್ರಕರ್ತರ ಮೇಲೆ ಹಾಕಿರುವ ನಿರ್ಬಂಧ ತಕ್ಷಣವೇ ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಸಂಸತ್ನಲ್ಲಿ ಕೋವಿಡ್ ಮಹಾಮಾರಿ ತಡೆಯುವ ಉದ್ದೇಶದಿಂದ ಪ್ರೆಸ್ ಗ್ಯಾಲರಿಯಲ್ಲಿ ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದು ತೀವ್ರ ದುಃಖ ಮತ್ತು ಆಘಾತಕಾರಿ ಸಂಗತಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿ ಮೃತಪಟ್ಟ ರೈತರ ದಾಖಲೆ ಇಲ್ಲ, ಪರಿಹಾರವೂ ಇಲ್ಲ: ಕೇಂದ್ರ ಸರ್ಕಾರ
ಸಂಸತ್ತಿನ ಪ್ರೆಸ್ ಗ್ಯಾಲರಿಯಲ್ಲಿ ಮಾಧ್ಯಮ ಪ್ರವೇಶ ನಿರ್ಬಂಧಿಸುವ ಮೋದಿ ಸರ್ಕಾರದ ಕ್ರಮ ಪತ್ರಕರ್ತರ ಗುಂಪು ಖಂಡಿಸಿದ್ದು, ಪ್ರತಿಭಟನೆ ಸಹ ನಡೆಸಿತು. ಅಧಿವೇಶನದಲ್ಲಿ ಬೆರಳೆಣಿಕೆಯಷ್ಟು ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದು ತೀವ್ರ ನೋವಿನ ವಿಚಾರವಾಗಿದೆ ಎಂದಿದ್ದಾರೆ.
ಅಧಿವೇಶನದ ಸಂದರ್ಭದಲ್ಲಿ ಸಂಸತ್ತು ದೇಶದ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದು, ಜ್ವಲಂತ ಸಾರ್ವಜನಿಕ ಸಮಸ್ಯೆಗಳನ್ನ ಜನರಿಗೆ ತಿಳಿಸುವ ಜವಾಬ್ದಾರಿಯನ್ನ ಮಾಧ್ಯಮಗಳು ಮಾಡ್ತಿವೆ ಎಂದು ತಿಳಿಸಿದ್ದಾರೆ.