ತಿರುವನಂತಪುರಂ (ಕೇರಳ): 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಬಹುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಕೇರಳದ ತಿರುವನಂತಪುರಂ ಸಂಸದ ಶಶಿ ತರೂರ್ ಹೇಳಿದ್ದಾರೆ.
ತಿರುವನಂತಪುರಂನ ಟೆಕ್ನೋಪಾರ್ಕ್‌ನಲ್ಲಿ ಸೋಮವಾರ ಅಮೆರಿಕ ಮೂಲದ ಮತ್ತು ಸಿಲಿಕಾನ್ ವ್ಯಾಲಿ-ಇನ್‌ಕ್ಯುಬೇಟೆಡ್ ಡಿ2ಸಿ (ಡೈರೆಕ್ಟ್-ಟು-ಕನ್ಸ್ಯೂಮರ್)ಯ ವೇ.ಕಾಮ್‌ನ ಕಚೇರಿ ಉದ್ಘಾಟಿಸಿದ ನಂತರ ವೃತ್ತಿಪರರೊಂದಿಗೆ ಶಶಿ ತರೂರ್ ಸಂವಾದ ನಡೆಸಿದರು. ಈ ವೇಳೆ, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿರುವುದರಿಂದ ಅಚ್ಚರಿಯ ಫಲಿತಾಂಶ ಬರಬಹುದು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮಣಿಸಿ ಕೇಂದ್ರದಲ್ಲಿ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಆದ್ದರಿಂದ ನಾವು ಕಾದು ನೋಡಬೇಕಾಗಿದೆ ಎಂದು ತರೂರ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಭಾರತ vs ಸೆಕ್ಯುಲರ್ ಇಂಡಿಯಾ: 2024ರ ಲೋಕಸಭೆ ಚುನಾವಣೆ ಕುರಿತ ಪುಸ್ತಕ ಬಿಡುಗಡೆಗೆ ಸಜ್ಜು
ಚುನಾವಣೋತ್ತರ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲು ಚುನಾವಣಾ ಫಲಿತಾಂಶ ಪ್ರಕಟವಾಗಬೇಕು. ಕೇವಲ ಒಂದು ಪಕ್ಷ ಇಲ್ಲ. ಇಲ್ಲಿ ಸಮ್ಮಿಶ್ರವಾಗಿರುವ ಕಾರಣ ಆ ಪಕ್ಷಗಳ ನಾಯಕರು ಒಟ್ಟಾಗಿ ಯಾರನ್ನಾದರೂ ಪ್ರಧಾನಿಯಾಗಿ ಆಯ್ಕೆ ಮಾಡಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ಊಹೆ ಏನೆಂದರೆ, ಕಾಂಗ್ರೆಸ್ ಪಕ್ಷದಿಂದ ಖರ್ಗೆ ಅವರು. ಇವರನ್ನು ಆಯ್ಕೆ ಮಾಡಿದರೆ ಭಾರತದ ಮೊದಲ ದಲಿತ ಪ್ರಧಾನಿಯಾಗಲಿದ್ದಾರೆ. ಇಲ್ಲವೇ, ರಾಹುಲ್ ಗಾಂಧಿ ಆಗಬಹುದು ಎಂದು ಕಾಂಗ್ರೆಸ್ ಸಂಸದ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್, ಟಿಎಂಸಿ, ಆಮ್ ಆದ್ಮಿ ಪಕ್ಷ, ಆರ್ಜೆಡಿ, ಜೆಡಿಯು, ಡಿಎಂಕೆ, ಸಿಪಿಐ, ಸಿಪಿಐಎಂ ಸೇರಿದಂತೆ ಸುಮಾರು 26 ಪಕ್ಷಗಳು 'ಇಂಡಿಯಾ' ಹೆಸರಲ್ಲಿ ಒಗ್ಗಟ್ಟಾಗಿವೆ. ಪಾಟ್ನಾ, ಬೆಂಗಳೂರು ಹಾಗೂ ಮುಂಬೈನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಆರ್ಜೆಡಿ ನಾಯಕ ಲಾಲು ಪ್ರಸಾದ್ ಸೇರಿ ಅನೇಕ ನಾಯಕರು ಮೂರು ಸಭೆಗಳನ್ನು ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಜಂಟಿಯಾಗಿ ಸ್ಪರ್ಧೆ ಮಾಡುವ ನಿರ್ಣಯವನ್ನು ತೆಗೆದುಕೊಂಡಿವೆ. ಅಲ್ಲದೇ, ಸಮನ್ವಯ ಸಮಿತಿಯನ್ನೂ ರಚಿಸಿದ್ದು, ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಯನ್ನು ಕೊಡು - ಕೊಳ್ಳುವಿಕೆಯ ಪ್ರಕ್ರಿಯೆ ಮೂಲಕ ಸಹಕಾರಿ ಮನೋಭಾವದಲ್ಲಿ ಕೈಗೊಳ್ಳಲು ಎಲ್ಲ ಪಕ್ಷಗಳು ನಿರ್ಧರಿಸಿವೆ.
ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಯಾರೆಂಬುದು ಚುನಾಯಿತ ಸಂಸದರು ನಿರ್ಧರಿಸುತ್ತಾರೆ: ಪಿಎಲ್ ಪುನಿಯಾ