ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಡುವೆಯೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ಶಾಸಕರಲ್ಲಿ ಲಾಬಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಡಿ.21ರಂದು ನೂತನವಾಗಿ ಆಯ್ಕೆಯಾಗಿರುವ ಶಾಸಕರ ಸಭೆ ಕರೆಯುವಂತೆ ಗುಜರಾತ್ ಉಸ್ತುವಾರಿ ರಘು ಶರ್ಮಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ.
2017ರ ಚುನಾವಣೆಯಲ್ಲಿ 182 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಶಾಸಕರ ಕೇವಲ 17ಕ್ಕೆ ಕುಸಿದಿದೆ. ಇದರ ನಡುವೆ ಶಾಸಕಾಂಗ ಪಕ್ಷದ ಸ್ಥಾನಕ್ಕಾಗಿ ಶೈಲೇಶ್ ಪರ್ಮಾರ್, ಸಿಜೆ ಚಾವ್ಡಾ ಮತ್ತು ಇನ್ನೂ ಕೆಲವು ಶಾಸಕರನ್ನು ಲಾಬಿ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 156 ಸೀಟು ಗೆದ್ದು ಗುಜರಾತ್‌ನಲ್ಲಿ ಬಿಜೆಪಿ ದಾಖಲೆಯ ಜಯಭೇರಿ: 'ಕೈ'ಗೆ ಪ್ರತಿಪಕ್ಷ ಸ್ಥಾನವೂ ಇಲ್ಲ!
ಆದಾಗ್ಯೂ, ವಿಧಾನಸಭೆಯಲ್ಲಿ ಕಾಂಗ್ರೆಸ್ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಏಕೆಂದರೆ ಗುಜರಾತ್ ವಿಧಾನಸಭೆಯಲ್ಲಿ ಶೇ.10ರಷ್ಟು ಎಂದರೆ ಕನಿಷ್ಠ 18 ಶಾಸಕರನ್ನು ಹೊಂದಿರುವ ವಿರೋಧ ಪಕ್ಷವು ಅಧಿಕೃತ ಪ್ರತಿಪಕ್ಷದ ಸ್ಥಾನವನ್ನು ಪಡೆಯುತ್ತದೆ. ಈ ಬಾರಿ ಕಾಂಗ್ರೆಸ್‌ಗೆ ಆ ಸಂಖ್ಯೆಗಿಂತ ಒಂದು ಸ್ಥಾನದ ಕೊರತೆಯಿದ್ದು, ಪ್ರತಿಪಕ್ಷದ ಸ್ಥಾನದ ವಿಚಾರವಾಗಿ ಸ್ಪೀಕರ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಇದರ ಮಧ್ಯೆ ಶಾಸಕಾಂಗ ಪಕ್ಷದ ಸ್ಥಾನಕ್ಕೆ ಶಾಸಕರಲ್ಲಿ ಪೈಪೋಟಿ ಏರ್ಪಟ್ಟ ಕಾರಣ ಡಿ.21ರಂದು ಶಾಸಕರ ಸಭೆಯನ್ನು ಕರೆಯಲಾಗಿದೆ ಎಂದು ಗುಜರಾತ್ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಬಿಎಂ ಸಂದೀಪ್ ಕುಮಾರ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ. ಅಲ್ಲದೇ. ಅಂದೇ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಸಭೆಯನ್ನೂ ಕರೆಯಲಾಗಿದೆ ಎಂದು ತಿಳಿದು ಬಂದಿದೆ.
ಚುನಾವಣಾ ಸೋಲಿನ ಪರಾಮರ್ಶೆ: ಡಿ.21ರಂದು ಶಾಸಕರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಸಭೆಯಲ್ಲಿ ಚುನಾವಣಾ ಸೋಲಿನ ಬಗ್ಗೆ ಪರಾಮರ್ಶೆ ಸಹ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಫಲಿತಾಂಶಗಳು ನಿರಾಶಾದಾಯಕವಾಗಿದ್ದರೂ ಕೂಡ ಎದೆಗುಂದುವ ಅಗತ್ಯವಿಲ್ಲ ಎಂಬ ಮಾತುಗಳನ್ನು ಪಕ್ಷದ ಹಿರಿಯರ ಹೇಳುತ್ತಾರೆ.
ನಮ್ಮ ಚುನಾವಣಾ ಫಲಿತಾಂಶಗಳು ನಿರಾಶಾದಾಯಕವಾಗಿವೆ. ಆದರೆ, ನಾವು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ಆಮ್ ಆದ್ಮಿ ಪಕ್ಷ ಶೇ.13ರಷ್ಟು ಮತಗಳನ್ನು ಗಳಿಸುವ ಮೂಲಕ ನಮ್ಮ ಪಕ್ಷಕ್ಕೆ ಹಾನಿ ಮಾಡಿದೆ. ಆದರೂ, ನಾವು ಇನ್ನೂ ಶೇ.27ರಷ್ಟು ಮತಗಳನ್ನು ಹೊಂದಿದ್ದೇವೆ. ನಾವು ಸಂಘಟನೆಯನ್ನು ಬಲಪಡಿಸಿದರೆ, ಮುಂದಿನ ಕೆಲವು ವರ್ಷಗಳಲ್ಲಿ ಕಳೆದುಹೋದ ಮತಗಳ ಪಾಲನ್ನು ಮರಳಿ ಪಡೆಯಲು ಸಾಧ್ಯವಿದೆ ಎಂದು ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ ಹಿರಿಯ ನಾಯಕ ದೀಪಕ್ ಬಬಾರಿಯಾ 'ಈಟಿವಿ ಭಾರತ್'ಗೆ ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಪಿಚ್ನಲ್ಲಿ ಬಿಜೆಪಿ ಆಡುವುದು ಅನಿವಾರ್ಯ: ಜೈರಾಮ್ ರಮೇಶ್
ಗುಜರಾತ್ ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾತ್ರವೇ ನೇರ ಎದುರಾಳಿ. ನಮ್ಮ ಕಾರ್ಯಕರ್ತರು ಇನ್ನೂ ಭರವಸೆಯಲ್ಲಿದ್ದಾರೆ. ಕಠಿಣ ಗುರಿಯತ್ತ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದೂ ಬಬಾರಿಯಾ ಹೇಳಿದರು. ಇದೇ ವೇಳೆ ರಾಜ್ಯ ಘಟಕವನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳ ಬಗ್ಗೆ ಖರ್ಗೆ ಚರ್ಚಿಸುತ್ತಿದ್ದಾರೆ. ಆದರೆ, ಶಾಸಕರ ನಡುವಿನ ಅಧಿಕಾರಕ್ಕಾಗಿ ಜಗಳವನ್ನು ಮೊದಲು ಇತ್ಯರ್ಥಪಡಿಸಬೇಕು ಮತ್ತು ಸ್ಥಳೀಯ ನಾಯಕರಿಗೆ ವಿಶ್ವಾಸ ತುಂಬ ಕೆಲಸವಾಗಬೇಕಿದೆ ಎಂದು ಮತ್ತೊಬ್ಬ ಮುಖಂಡ ಅಭಿಪ್ರಾಯಪಟ್ಟಿದ್ದಾರೆ.
ಹಾಥ್ ಸೇ ಹಾಥ್ ಜೋಡೋ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಜನವರಿಯಲ್ಲಿ ಮುಕ್ತಾಯವಾಗಿದೆ. ನಂತರದ ಎರಡು ತಿಂಗಳ ಕಾಲ ಕಾಂಗ್ರೆಸ್ 'ಹಾಥ್ ಸೇ ಹಾಥ್ ಜೋಡೋ ಅಭಿಯಾನವನ್ನು ಆರಂಭಿಸಿದೆ. ಈ ಬಗ್ಗೆ ಕೂಡ ಉಸ್ತುವಾರಿ ರಘು ಶರ್ಮಾ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಡಿಸೆಂಬರ್ 8ರಂದು ಚುನಾವಣಾ ಫಲಿತಾಂಶ ದಿನವೇ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಅದನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಡಿ.21ರಂದು ಶಾಸಕಾಂಗ ಪಕ್ಷದ ನಾಯಕರಲ್ಲದೆ, ಗುಜರಾತ್‌ಗೆ ಹೊಸ ರಾಜ್ಯ ಘಟಕದ ಮುಖ್ಯಸ್ಥರೂ ಸಿಗಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆಡಳಿತ ವಿರೋಧಿ ಅಲೆ ಇಲ್ಲ, ಇದೇ ನಮ್ಮ ಸಾಧನೆ: ರಾಜಸ್ಥಾನ ಸಿಎಂ ಗೆಹ್ಲೋಟ್