ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆಯೊಡ್ಡಿರುವ ಆಡಿಯೋವೊಂದು ವೈರಲ್ ಆಗಿದೆ. ಆಡಿಯೋದಲ್ಲಿರುವ ಧ್ವನಿ ಖಲಿಸ್ತಾನ್ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನುದ್ದು ಎನ್ನಲಾಗಿದ್ದು, 59 ಸೆಕೆಂಡ್ಗಳ ಆಡಿಯೋ ರೆಕಾರ್ಡಿಂಗ್‌ನಲ್ಲಿ, ಆಗಸ್ಟ್ 15ರಂದು ಸಿಎಂ ಯೋಗಿಗೆ ಲಕ್ನೋದಲ್ಲಿ ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ಬೆದರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಡಿಕೆ ಠಾಕೂರ್, ದೆಹಲಿಯಿಂದ ಆಡಿಯೋ ಲಭ್ಯವಾಗಿರುವ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ, ಅಲ್ಲದೆ ಕೃತ್ಯ ಎಸಗಿರುವ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ಲಕ್ನೋದಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಭಾರತದಲ್ಲಿ ನಿಷೇಧಿತ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ್ (SFJ) ನ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಈ ಹಿಂದೆಯೂ ಅನೇಕ ರಾಜಕಾರಣಿಗಳಿಗೆ ಬೆದರಿಕೆ ಹಾಕಿದ್ದ.
ಬಿಜೆಪಿ, ಆರ್ಎಸ್ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರೈತರ ವಿರೋಧಿಯಾಗಿದ್ದಾರೆ. ಇವರಿಗೆ ಸಿಎಂ ಯೋಗಿ ಆದಿತ್ಯನಾಥ್ ಬೆಂಬಲಿಸುತ್ತಾರೆ. ಯುಪಿ ಸರ್ಕಾರಕ್ಕೆ ತ್ರಿವರ್ಣ ಧ್ವಜ ಹಾರಿಸಲು ಅಲ್ಲಿನ ಜನರು ಮತ್ತು ರೈತರು ಅವಕಾಶ ನೀಡಬಾರದು. ಅಲ್ಲದೆ, ತಾಂಡಾ, ಹರ್ದುಗಂಜ್, ಪಂಕಿ, ಪರಿಚಾ ಮತ್ತು ಇತರ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಬೇಕು ಎಂದು ಆಡಿಯೋ ಸಂದೇಶದಲ್ಲಿ ಹೇಳಲಾಗಿದೆ.
ಅಲ್ಲದೆ, ಸಹರಾನ್ಪುರದಿಂದ ರಾಂಪುರದವರೆಗಿನ ಪ್ರದೇಶವನ್ನು ಖಲಿಸ್ತಾನದ ಸ್ವಾಧೀನಕ್ಕೆ ಪಡೆದುಕೊಳ್ಳಲಾಗುವುದು. ಪಂಜಾಬ್ನಂತೆ ಹಿಮಾಚಲ ಪ್ರದೇಶವನ್ನು ನಮ್ಮ ಪ್ರಾಬಲ್ಯಕ್ಕೆ ಒಳಪಡಿಸಿಕೊಳ್ಳಲಾಗುವುದು, ಯಾಕೆಂದರೆ ಅಲ್ಲಿನ ಕೆಲ ಭಾಗಗಳು ಹಿಂದಿನಿಂದಲೂ ಪಂಜಾಬ್ಗೆ ಸೇರಿದ್ದವು ಎಂದು ಆಡಿಯೋದಲ್ಲಿ ಬೆದರಿಕೆ ಒಡ್ಡಲಾಗಿದೆ.
ಭಾರತದಲ್ಲಿ ದೇಶವಿರೋಧಿ ಚಟುವಟಿಕೆ ನಡೆಸುವ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮೇಲೆ 2019ರ ಜುಲೈ 10ರಿಂದ ನಿಷೇಧ ಹೇರಲಾಗಿದೆ.