ತಿರುವನಂತಪುರಂ (ಕೇರಳ): ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ನರ್ಸ್ವೊಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ ಎಂದರೆ ಸುಮಾರು 45 ಕೋಟಿ ರೂಪಾಯಿ ಗೆದ್ದಿದ್ದಾರೆ. ಲವ್ಲ್ಮೋಲ್ ಅಚಾಮಾ ಎಂಬುವವರಿಗೆ ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಈ ಬಂಪರ್ ಲಾಟರಿ ಹೊಡೆದಿದೆ.
ಇದನ್ನೂ ಓದಿ: ಕೇರಳ ಬಂಪರ್ ಲಾಟರಿ: ಮಲಪ್ಪುರಂನಲ್ಲಿ ಮಾರಾಟವಾದ ಟಿಕೆಟ್ಗೆ 12ಕೋಟಿ ಬಹುಮಾನ!
ಅಬುಧಾಬಿಯಲ್ಲಿ ಕಳೆದ 21 ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿರುವ ಲವ್ಲ್ಮೋಲ್ ಅಚಾಮಾ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾರೆ. ತನ್ನ ಪತಿ ಪ್ರತಿ ತಿಂಗಳು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಬಹುಮಾನದ ಮೊತ್ತದ ಕುಟುಂಬದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವ ಅವರು, ಬಾಕಿ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ, ಶನಿವಾರ ನಡೆದ ಇತರ ಡ್ರಾಗಳಲ್ಲಿ ನಾಲ್ವರು ಕೇರಳಿಗರು ಬಂಪರ್ ಬಹುಮಾನ ಗೆದ್ದಿದ್ದಾರೆ. ಯುಎಇಯ ರಾಜಧಾನಿ ಅಬುಧಾಬಿಯು ಕಳೆದ ಐದು ದಶಕಗಳಿಂದ ಅನೇಕ ವಲಸಿಗ ಕೇರಳೀಯರ ನೆಲೆಯಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಕೇರಳದಲ್ಲೂ ಓಣಂ ಲಾಟರಿಯಲ್ಲಿ ವ್ಯಕ್ತಿಯೊಬ್ಬರಿಗೆ 25 ಕೋಟಿ ರೂಪಾಯಿ ಬಹುಮಾನ ಬಂದಿತ್ತು. ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇದನ್ನೂ ಓದಿ: ಕೇರಳ ಲಾಟರಿ ಟಿಕೆಟ್.. ಆನ್ಲೈನ್ ಹಾಗೂ ಹೊರ ರಾಜ್ಯದವರು ಖರೀದಿಸಬಹುದೇ, ಗೆದ್ದ ಹಣ ಪಡೆಯುವುದು ಹೇಗೆ?
ಆಟೋ ರಿಕ್ಷಾ ಚಾಲಕ ಕಮ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಅನೂಪ್ ಎಂಬುವವರಿಗೆ ಈ ಲಕ್ ಖುಲಾಯಿಸಿತ್ತು. ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದ ಈ ಅನೂಪ್ ಇದಕ್ಕಾಗಿ 3 ಲಕ್ಷ ರೂಪಾಯಿಗಳ ಸಾಲಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಅರ್ಜಿ ಅಂಗೀಕಾರವಾದ ಮರು ದಿನವೇ 25 ಕೋಟಿ ರೂ.ಗಳ ಬಂಪರ್ ಬಹುಮಾನ ದೊರೆದಿತ್ತು. ಅನೂಪ್ ಗೆದ್ದಿರುವ ಅಷ್ಟೂ ಹಣಕ್ಕೆ ಶೇ.30 ಕ್ಕಿಂತಲೂ ಹೆಚ್ಚು ತೆರಿಗೆ ಕಟ್ಟಬೇಕು. ಅಂದರೆ ಗೆದ್ದ 25 ಕೋಟಿ ರೂಪಾಯಿಗಳಲ್ಲಿ 10 ಕೋಟಿಯಷ್ಟು ತೆರಿಗೆ ರೂಪದಲ್ಲಿ ಕಡಿತವಾಗಿ ಅನೂಪ್ಗೆ 15 ಕೋಟಿ ರೂಪಾಯಿ ಸಿಗುತ್ತೆ ಎಂದು ವರದಿಯಾಗಿತ್ತು.
ಮತ್ತೊಂದೆಡೆ, ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ ಆಗಿದ್ದ ಅನೂಪ್ಗೆ ಸಂಕಷ್ಟ ಕೂಡ ಎದುರಾಗಿತ್ತು. ಹಣ ಬಂದೊಡನೆ ಅವರಿಗೆ ಗೊತ್ತಿರುವವರು, ಗೊತ್ತಿಲ್ಲದವರು ಆರ್ಥಿಕ ಸಹಾಯ ಕೋರಿ ದುಂಬಾಲು ಬೀಳಲು ಆರಂಭಿಸಿದ್ದರು. ಇದರಿಂದ ರೋಸಿ ಹೋಗಿ ಅನೂಪ್ ತಾನು ಈ ಹಣ ಗೆಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಎಂದೂ ಬೇಸರ ವ್ಯಕ್ತಪಡಿಸುತ್ತಿದ್ದ ಬಗ್ಗೆಯೂ ವರದಿಯಾಗಿತ್ತು.
ಇದನ್ನೂ ಓದಿ: ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್