ಆಲಪ್ಪುಳ( ಕೇರಳ): ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಆನ್‌ಲೈನ್ ತರಗತಿಗಳು ಮತ್ತು ಪ್ರವೇಶಾತಿಗಳು ಮಾತ್ರ ನಡೆಯುತ್ತಿದೆ. ಇನ್ನು ಕೇರಳದಲ್ಲಿ ಇಂದಿನಿಂದ ಆನ್‌ಲೈನ್ ತರಗತಿಗೆ ಪ್ರವೇಶಾತಿ ಶುರುವಾಗಿದ್ದು, ಈ ಸಂದರ್ಭದಲ್ಲಿ ಚತುರ್ವಳಿ (ನಾಲ್ಕು) ಮಕ್ಕಳು ಶಾಲೆಗೆ ಸೇರಿದ್ದಾರೆ.
ಶಶಿಕುಮಾರ್- ಅಜಿತಾ ದಂಪತಿಯ ಆರ್ಯ, ಐಶ್ವರ್ಯಾ, ಅಧರ್ಶ್ ಮತ್ತು ಅದ್ರಿಶಯ ಎಂಬ ಮಕ್ಕಳು ಆನ್‌ಲೈನ್ ಕ್ಲಾಸ್ಗೆ ಸೇರಿದ್ದಾರೆ. ಕೇರಳದಲ್ಲಿ ಲಾಕ್‌ಡೌನ್ ಮಧ್ಯೆ ಎರಡು ತಿಂಗಳ ರಜಾದಿನಗಳ ನಂತರ ಜೂನ್ 1 ರಿಂದ ಆನ್‌ಲೈನ್ ತರಗತಿಗಳು ಮತ್ತೆ ಆರಂಭಗೊಂಡಿದೆ.
ಪುದಿಯಾಕಾವ್ ಉಳುವಾ ಸರ್ಕಾರಿ ಶಾಲೆಗೆ ಚತುರ್ವಳಿ ಮಕ್ಕಳು ದಾಖಲಾಗಿದ್ದಾರೆ. ಶಾಲೆಗೆ ತೆರಳಲು ಕೊರೊನಾದಿಂದ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಮನೆಗೆ ತೆರಳಿ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಇನ್ನು ಹೆರಿಗೆ ಸಮಯದಲ್ಲಿ, ದಂಪತಿ ಕೊನೆಯ ಕ್ಷಣದವರೆಗೆ ತ್ರಿವಳಿ ಮಕ್ಕಳು ಹುಟ್ಟುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ, ಸಿಸೇರಿಯನ್ ಮಾಡಿ ವೈದ್ಯರು ಮೂರು ಶಿಶುಗಳನ್ನು ಹೆರಿಗೆ ಮಾಡಿದ ನಂತರ ಹೊಲಿಗೆ ಹಾಕಲು ಮುಂದಾದಾಗ, ನಾಲ್ಕನೆಯ ಮಗೂ ಇರುವುದು ಅರಿವಾಗಿದೆ. ಇನ್ನು ನಾಲ್ಕನೆ ಮಗುವನ್ನು ಸಹ ದಂಪತಿ ಸಂತೋಷದಿಂದ ಬರಮಾಡಿಕೊಂಡಿದ್ದಾರೆ.
ಈ ಮಕ್ಕಳು ಜನಿಸಿದ್ದು 8 ಡಿಸೆಂಬರ್ 2015 ರಂದು ಬೆಳಿಗ್ಗೆ 7 ಗಂಟೆಗೆ. ಶಶಿಕುಮಾರ್ ಅವರ ಮೊದಲ ಪತ್ನಿ ಸಾವಿನ ನಂತರ ಅಜಿತಾಳನ್ನು ಮದುವೆಯಾದರು. 5 ವರ್ಷಗಳ ಬಳಿಕ ಈ ದಂಪತಿಗೆ ನಾಲ್ಕು ಮಕ್ಕಳು ಹುಟ್ಟಿರುವುದು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.