ತಿರುವನಂತಪುರಂ(ಕೇರಳ): ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಹೊಸ ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನೆರೆರಾಜ್ಯ ಕೇರಳದಲ್ಲಿ ಮೂವರು ಮಹಿಳೆಯರು ಸೇರಿ ಒಂದು ವಿಶಿಷ್ಠ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ನಾವು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಬಾರದು, ಅದರಾಚೆಗೂ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಹಂಬಲಿಸಿರುವ ಕಾಸರಗೋಡಿನ ಮೂವರ ಕನಸೀಗ ನನಸಾಗಿದೆ. ಇವರ ಪರಿಶ್ರಮದ ಫಲವಾಗಿ ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಂದಲೇ ಸಂಪೂರ್ಣವಾಗಿ ನಿರ್ವಹಣೆಯಾಗುವ ದ್ವಿಚಕ್ರ ವಾಹನದ ವರ್ಕ್ಶಾಪ್ ಆರಂಭವಾಗಿದೆ.
ಕಳೆದೆರಡು ವಾರಗಳ ಹಿಂದಷ್ಟೇ ಮನೆ, ಕುಟುಂಬ, ಅಡುಗೆಯಲ್ಲೇ ಕಾಲ ಕಳೆಯುತ್ತಿದ್ದ ಈ ಮಹಿಳೆಯರು ಇದೀಗ ಸ್ಪಾನರ್ ಹಿಡಿದು ದ್ವಿಚಕ್ರ ವಾಹನಗಳ ರಿಪೇರಿ ಮಾಡುತ್ತಿದ್ದಾರೆ. ಇದು ಮಹಿಳೆಯರಿಗೆ ಸಂಬಂಧಿಸಿದ್ದಲ್ಲ ಎಂದು ಹೇಳುವ ಕ್ಷೇತ್ರದಲ್ಲೇ ಛಾಪು ಮೂಡಿಸಿದ್ದಾರೆ.
ಹೊಸ ಉದ್ಯಮದ ಕನಸು ಕಂಡಿದ್ದ ಇವರ ಕನಸಿಗೆ ರೆಕ್ಕೆ ಮೂಡಿಸಿದ್ದು ಕೇರಳ ಸರ್ಕಾರ ಮಹಿಳಾ ಸಬಲೀಕರಣ ಕಾರ್ಯಕ್ರಮ. ಈ ಮಹಿಳೆಯರು ಕುಡುಂಬಶ್ರೀ ಎಂಬ ಯೋಜನೆಯಡಿ ದ್ವಿಚಕ್ರ ವಾಹನ ಮೆಕಾನಿಕ್ಸ್ ತರಬೇತಿ ಪಡೆದಿದ್ದಾರೆ. ತರಬೇತಿಯ ಬಳಿಕ ಮಹಿಳೆಯರಾದ ಬಿನ್ಸಿ, ಮೆರ್ಸಿ ಮತ್ತು ಬಿಂಟು ಸೇರಿಕೊಂಡು ತಮ್ಮದೇ ಆದ ವರ್ಕ್ ಶಾಪ್ ಆರಂಭಿಸಿದ್ದಾರೆ. ಕಾಸರಗೋಡಿನ ಭೀಮಂಪಡಿಯಲ್ಲಿ 'ಸಿಗನೊರಾ' ಎಂಬ ಹೆಸರಿನ ಮೊದಲ ಮಹಿಳಾ ದ್ವಿಚಕ್ರ ವರ್ಕ್ಶಾಪ್ ಶುರು ಮಾಡಿದ್ದಾರೆ.
"ನಮ್ಮದೇ ಆದ ಉದ್ಯಮ ತೆರೆಯಬೇಕೆಂಬ ಕನಸು ಸಾಕಾರವಾಗಿರುವುದಕ್ಕೆ ಖುಷಿ ಇದೆ. ಅಡುಗೆ ಮನೆಗೆ ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದ ನಾವು ಅದರಿಂದ ಹೊರಬಂದಿದ್ದಕ್ಕೆ ಸಂತಸವಿದೆ" ಎನ್ನುತ್ತಾರೆ ಮೆರ್ಸಿ. "ನನಗೆ ವಾಹನ ಚಾಲನೆ ಅಂದರೆ ಬಲು ಇಷ್ಟ, ಇದೀಗ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ" ಎಂದು ಬಿಂಟು ಹೇಳಿದರು.
"ಇದು ಕನಸು ನನಸಾದ ಕ್ಷಣ. ಈ ಕ್ಷೇತ್ರದಲ್ಲಿ ನಮ್ಮನ್ನು ನಾವು ಸಾಬೀತು ಮಾಡಬೇಕಿತ್ತು" ಎಂದು ಬಿನ್ಸಿ ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: Success Story: ರೋಗಿಗಳ ಊಟ ಎಂದು ಜರಿದರೂ ಕಿಚಡಿಯಲ್ಲೇ ಕೋಟಿ ಕೋಟಿ ಲಾಭ ಗಳಿಸಿದ ಯುವತಿ.. ಯಾರೀ ಸಾಧಕಿ!