ಕೊಟ್ಟಾಯಂ, ಕೇರಳ : ಇತ್ತೀಚೆಗಷ್ಟೇ ರಿಚರ್ಡ್ ಬ್ರಾನ್ಸನ್ ತಂಡ ಬಾಹ್ಯಾಕಾಶ ಯಾನ ಪೂರ್ಣಗೊಳಿಸಿದೆ. ಅವರೇ ಸ್ಥಾಪಿಸಿದ ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್‌ಫ್ಲೈಟ್ ಸಂಸ್ಥೆ ನಿರ್ಮಿಸಿದ ವಿಎಸ್‌ಎಸ್ ಯೂನಿಟಿ ರಾಕೆಟ್ ಮೂಲಕ ಐವರು ಸಹೋದ್ಯೋಗಿಗಳೊಂದಿಗೆ ಬಾಹ್ಯಾಕಾಶಕ್ಕೆ ಹೋಗಿ ವಾಪಸಾಗಿದ್ದಾರೆ. ಈಗ ಭಾರತದ ಮೊದಲ ವ್ಯಕ್ತಿ ಬಾಹ್ಯಾಕಾಶಕ್ಕೆ ಹೋಗಲು ಸಜ್ಜಾಗುತ್ತಿದ್ದಾರೆ.
ಸಂತೋಷ್ ಜಾರ್ಜ್ ಕುಲಂಗರ ಎಂಬ ಕೇರಳದ ಪ್ರವಾಸಿಗ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ. ಅವರು ರಿಚರ್ಡ್ ಬ್ರಾನ್ಸನ್‌ರ ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಕಾರ್ಯಕ್ರಮದ ಭಾಗವಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ. ಬಾಹ್ಯಾಕಾಶಯಾನಕ್ಕಾಗಿ ಟಿಕೆಟ್ ಕಾಯ್ದಿರಿಸಿದ ಏಕೈಕ ಭಾರತದ ವ್ಯಕ್ತಿಯಾಗಿದ್ದಾರೆ.
ಸಂತೋಷ್ ಜಾರ್ಜ್ ಕುಲಂಗರ ಅವರು ಸಂಚರಾಮ್ ಎಂಬ ಒನ್ ಮ್ಯಾನ್ ಆರ್ಮಿ ಟ್ರಾವೆಲಾಗ್ ಕಾರ್ಯಕ್ರಮಕ್ಕೆ ಪ್ರಸಿದ್ಧರಾಗಿದ್ದಾರೆ. ಅವರು ಈಗಾಗಲೇ 24 ವರ್ಷಗಳ ಅವಧಿಯಲ್ಲಿ 130ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ಸಂತೋಷ್ 2007ರಿಂದ ಬಾಹ್ಯಾಕಾಶ ಪ್ರಯಾಣಕ್ಕೆ ಪ್ರಯತ್ನಪಟ್ಟಿದ್ದರು. ಆದರೆ, ಅವರಿಗೆ ಈಗ ಅವಕಾಶ ಸಿಕ್ಕಿದೆ. ಜೊತೆಗೆ ಭಾರತದಿಂದ ಹಾರುವ ಮೊದಲ ಬಾಹ್ಯಾಕಾಶ ಪ್ರವಾಸಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಪ್ರಯಾಣ ವೆಚ್ಚ ಸುಮಾರು $2.5 ಲಕ್ಷ (1.8 ಕೋಟಿ) ಎಂದು ಅಂದಾಜಿಸಲಾಗಿದೆ. ಸಂತೋಷ್ ಅವರು ಸಂಪೂರ್ಣವಾಗಿ ತಮ್ಮ ವಿಡಿಯೋ ಕ್ಯಾಮೆರಾದಲ್ಲಿ ಆ ದೃಶ್ಯ ಸೆರೆ ಹಿಡಿಯಲಿದ್ದಾರೆ. ಈ ಪ್ರಯಾಣವು ಜಗತ್ತಿನಲ್ಲಿರುವ ಎಲ್ಲ ಮಲಯಾಳಿಗಳಿಗೆ ಸಮರ್ಪಣೆ ಎಂದು ಹೇಳಿದ್ದಾರೆ.
ವರ್ಜಿನ್ ಗ್ಯಾಲಕ್ಟಿಕ್ ಖಾಸಗಿ ಬಾಹ್ಯಾಕಾಶ ಹಾರಾಟ ಕಂಪನಿಯಾಗಿದೆ. ಅವರು ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಗುರಿ ಹೊಂದಿದ್ದಾರೆ. ರಿಚರ್ಡ್ ಬ್ರಾನ್ಸನ್ ವರ್ಜಿನ್ ಗ್ಯಾಲಕ್ಸಿಯ ಸ್ಥಾಪಕ.