ತಿರುವನಂತಪುರಂ: ‘ಆಪರೇಷನ್ ಆಗ್’ ಕಾರ್ಯಾಚರಣೆ ಅಡಿ ಕೇರಳ ಪೊಲೀಸರು ವಿವಿಧ ಅಪರಾಧ ಪ್ರಕರಣಗಳಲ್ಲಿ ಬೇಕಾಗಿರುವ 2,507 ಗ್ಯಾಂಗ್ಸ್ಟರ್ಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾನುವಾರ ರಾತ್ರಿ ಈ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿರುವನಂತಪುರಂ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜ್ ಮಾಹಿತಿ ನೀಡಿದ್ದಾರೆ. ಕೇರಳದ ಸಮಾಜ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಕಾಪಾ) ಪ್ರಕರಣಗಳಲ್ಲಿ ಆರೋಪಿಗಳಾದವರನ್ನು ಬಂಧಿಸಲು ಮುಖ್ಯವಾಗಿ ದಾಳಿಗಳನ್ನು ನಡೆಸಲಾಗುತ್ತಿದೆ.
ಆಪರೇಷನ್ ಎಎಜಿಯು ಸಮಾಜ ವಿರೋಧಿ ಶಕ್ತಿಗಳ ವಿರುದ್ಧದ ಕಾರ್ಯಾಚರಣೆಯಾಗಿದೆ. ಬಯೋಮೆಟ್ರಿಕ್ಸ್, ಇತ್ತೀಚಿನ ಫೋಟೋಗಳು, ಸಹವರ್ತಿಗಳು, ವಾಹನಗಳು ಮತ್ತು ಕುಟುಂಬ ಸೇರಿದಂತೆ ಅವರ ಎಲ್ಲ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಡೇಟಾ ಸಂಗ್ರಹಣೆ ಮತ್ತು ಅವರ ವಿರುದ್ಧ ಸಾಕ್ಷ್ಯ ಬಲಪಡಿಸುವುದು ಆಗ್ ಕಾರ್ಯಾಚರಣೆಯ ಮುಖ್ಯ ಗುರಿಯಾಗಿದೆ ಎಂದು ಪೊಲೀಸ್ ಆಯುಕ್ತ ನಾಗರಾಜ ತಿಳಿಸಿದ್ದಾರೆ.
ಕಳೆದ ರಾತ್ರಿ ನಾವು ಜಿಲ್ಲೆಯಾದ್ಯಂತ ಹಠಾತ್ ದಾಳಿ ನಡೆಸಿದ್ದೇವೆ ಮತ್ತು ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಗಳನ್ನು ಒಳಗೊಂಡಂತೆ ಸುಮಾರು 333 ಜನರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಮತ್ತು ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಗಳ ವಿಚಾರಣೆಗೆ ವಾರಂಟ್ ಪಡೆಯಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗಾಗಿ ಕೈಗೊಳ್ಳಲಾದ ವಿವಿಧ ಉಪಕ್ರಮಗಳ ಕುರಿತು ಮಾತನಾಡಿದ ಅವರು, ಮಹಿಳೆಯರ ಸುರಕ್ಷತೆಗಾಗಿ ವಿಶೇಷವಾಗಿ 'ಪಿಂಕ್ ಗಸ್ತು' ರಾತ್ರಿ ಗಸ್ತು ನಡೆಸಲಿದೆ. ದಿಢೀರ್ ವಾಹನ ತಪಾಸಣೆ ಮಾಡಲಾಗುವುದು ಮತ್ತು ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಪದೇ ಪದೆ ಲೈಂಗಿಕ ಅಪರಾಧ ಎಸಗುವವರ ಡೇಟಾ ಸಂಗ್ರಹಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.
ತಿರುವನಂತಪುರಂನಲ್ಲಿ 333 ಮಂದಿಯನ್ನು ಬಂಧಿಸಲಾಗಿದ್ದರೆ, ಕಣ್ಣೂರು ಜಿಲ್ಲೆಯಲ್ಲಿ 257 ಜನರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತ್ರಿಶೂರ್‌ನಲ್ಲಿ 301 ಬಂಧನಗಳು ದಾಖಲಾಗಿದ್ದು, ಕೋಯಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕ್ರಮವಾಗಿ 272 ಮತ್ತು 271 ಪ್ರಕರಣಗಳು ದಾಖಲಾಗಿವೆ.
ಹಿರಿಯ ನಾಗರಿಕರಿಗಾಗಿ ಪ್ರಶಾಂತಿ ಯೋಜನೆ ಪ್ರಾರಂಭಿಸಲಾಗುವುದು. ಅವರನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗುತ್ತದೆ. ಎ ಸಶಕ್ತ ಹಿರಿಯ ನಾಗರಿಕ, ಬಿ ಹಾಸಿಗೆ ಹಿಡಿದಿರುವ ಮತ್ತು ಸಿ ಸ್ವಲ್ಪ ಸಹಾಯ ಬೇಕಾಗುವ ಹಿರಿಯ ನಾಗರಿಕ ಎಂದು ವರ್ಗೀಕರಿಸಲಾಗಿದೆ. MSW ಸ್ವಯಂಸೇವಕರು ಮತ್ತು 'ಜನಮಿತ್ರಿ' ಪೊಲೀಸರು ಅವರನ್ನು ನೋಡಿಕೊಳ್ಳುತ್ತಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್-ಸಂಪತ್ ನೆಹ್ರಾ ಗ್ಯಾಂಗ್‌ನ ಇಬ್ಬರ ಬಂಧನ: ಇನ್ನು ಪಂಜಾಬ್‌ನಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಲು ಸಜ್ಜಾಗಿದ್ದ ಲಾರೆನ್ಸ್ ಬಿಷ್ಣೋಯ್-ಸಂಪತ್ ನೆಹ್ರಾ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ದೆಹಲಿಯ ಹೊರಭಾಗದ ಬವಾನಾ ಕಾಲುವೆ ಬಳಿ ಶುಕ್ರವಾರ ಶೂಟೌಟ್ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಸಂದೀಪ್ ಅಲಿಯಾಸ್ ರಿಕಿ (23) ಮತ್ತು ಜತಿನ್ (19) ಬಳಿಯಿಂದ ಎರಡು ಸ್ವಯಂಚಾಲಿತ ಪಿಸ್ತೂಲ್ ಮತ್ತು ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ಬವಾನಾ ಸಮೀಪದ ಖೇರಾ ಖುರ್ದ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಚಲನವಲನದ ಬಗ್ಗೆ ನಮಗೆ ಮಾಹಿತಿ ಇತ್ತು. ಶುಕ್ರವಾರ ಬೆಳಗ್ಗೆ ಖೇರಾ ಖುರ್ದ್ ಗ್ರಾಮದ ಬಳಿ ನಮ್ಮ ಅಧಿಕಾರಿಗಳು ಹೊಂಚು ಹಾಕಿ ನಿಗಾ ವಹಿಸಿದ್ದರು. ಇಬ್ಬರು ವ್ಯಕ್ತಿಗಳನ್ನು ನೋಡಿದ ನಾವು ಅವರಿಗೆ ನಿಲ್ಲುವಂತೆ ಸೂಚಿಸಿದೆವು. ಆದರೆ ಆರೋಪಿಗಳಲ್ಲಿ ಒಬ್ಬನಾದ ರಿಕಿ ಪೊಲೀಸರ ಮೇಲೆ ಎರಡು ಗುಂಡು ಹಾರಿಸಿದನು. ಪ್ರತಿಯಾಗಿ, ಪೊಲೀಸರು ಎರಡು ಗುಂಡು ಹಾರಿಸಿದರು ಮತ್ತು ಇಬ್ಬರನ್ನು ಬಂಧಿಸಿದರು ಎಂದು ಹೇಳಿದರು.
ಇದನ್ನೂ ಓದಿ: ಸರಗಳ್ಳತನ ಮಾಡುತ್ತಿದ್ದ ಮೂವರ ಬಂಧನ: 13 ಲಕ್ಷ ವೌಲ್ಯದ ಚಿನ್ನದ ಸರ ವಶ